ಮಂಗಳೂರು, ಮಾ.20 (DaijiworldNews/MB) : ''ರಾಜ್ಯದಲ್ಲಿ ಹಲವು ಸಮುದಾಯಗಳು ತಮ್ಮ ಸಮುದಾಯವನ್ನು ಹಿಂದುಳಿದ ವರ್ಗಗಳ 2 ಎ ಗೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸುತ್ತಿದೆ. ಸರ್ಕಾರ ಈ ಜಾತಿಗಳನ್ನು ಹಿಂದುಳಿದ ವರ್ಗಗಳ 2 ಎ ಗೆ ಸೇರ್ಪಡೆ ಮಾಡಿದರೆ ಮೀಸಲಾತಿ ವಿಚಾರದಲ್ಲಿ ನಿಜವಾದ ಹಿಂದುಳಿದ ವರ್ಗಗಳ ಜನರು ವಂಚಿತರಾಗುತ್ತಾರೆ'' ಎಂದು ಶಾಸಕ ಯು ಟಿ ಖಾದರ್ ಹೇಳಿದರು.

ಇಲ್ಲಿನ ಸರ್ಕ್ಯೂಟ್ ಹೌಸ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಸರ್ಕಾರವು ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ 2 ಎ ಮೀಸಲಾತಿ ನೀಡಿದರೆ, ಅದು ಹಿಂದುಳಿದ ಜಾತಿಗಳಾದ ಪೂಜಾರಿ, ತೀಯಾ, ಗಾಣಿಗ, ಗಟ್ಟಿ, ಆಚಾರಿ ಮತ್ತು ದಕ್ಷಿಣ ಕನ್ನಡದ ಇತರ ಹಿಂದುಳಿದ ಸಮುದಾಯಗಳಿಗೆ ಮಾಡುವ ಅನ್ಯಾಯವಾಗುತ್ತದೆ" ಎಂದು ಹೇಳಿದರು.
"ಬಿಜೆಪಿ ದ್ವಂದ್ವ ನಿಲುವಿನಿಂದಾಗಿ ಹಲವಾರು ಸಮುದಾಯಗಳು ಮೀಸಲಾತಿ ಬಯಸುತ್ತಿವೆ. ಚುನಾವಣೆಗೆ ಮುಂಚಿತವಾಗಿ ಮೀಸಲಾತಿ ನೀಡುವ ಬಗ್ಗೆ ಬಿಜೆಪಿ ಭರವಸೆ ನೀಡಿದ್ದರಿಂದ, ಈಗ ಆ ಸಮುದಾಯದ ಜನರು ಮೀಸಲಾತಿಗಾಗಿ ಒತ್ತಾಯಿಸುತ್ತಿದ್ದಾರೆ" ಎಂದರು.
"ಹಿಂದುಳಿದ ವರ್ಗಗಳು ಅನ್ಯಾಯಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಸಮುದಾಯಗಳ ಯುವಕರು ಭವಿಷ್ಯದಲ್ಲಿ ಹೆಚ್ಚಿನ ಅನ್ಯಾಯವನ್ನು ಎದುರಿಸಬೇಕಾಗುತ್ತದೆ" ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
"ಜಿಲ್ಲೆಯ ಸಂಸದರು ಮತ್ತು ಶಾಸಕರು ಈ ವಿಷಯದಲ್ಲಿ ಮೌನವಾಗಿದ್ದಾರೆ. ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ರಕ್ಷಿಸಲು ಅವರಿಗೆ ಯಾವುದೇ ಕಾಳಜಿ ಇಲ್ಲ, ಇದು ನೋವಿನ ಸಂಗತಿಯಾಗಿದೆ" ಎಂದು ಆರೋಪಿಸಿದರು.
"ಸರ್ಕಾರಿ ವಲಯದಲ್ಲಿ ಸುಮಾರು 2.5 ಲಕ್ಷ ಯುವಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಅರ್ಹತೆ ಮತ್ತು ಮೀಸಲಾತಿ ಆಧಾರದ ಮೇಲೆ ಅವರನ್ನು ನೇಮಕ ಮಾಡುವ ಮೂಲಕ ಅವರನ್ನು ಖಾಯಂ ನೌಕರರನ್ನಾಗಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು" ಎಂದು ಖಾದರ್ ಒತ್ತಾಯಿಸಿದರು.
"ಸರ್ಕಾರಿ ವಲಯವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಕ್ರಮವು ಮೀಸಲಾತಿಯನ್ನು ಪರೋಕ್ಷವಾಗಿ ರದ್ದುಗೊಳಿಸುವ ಒಂದು ಮಾರ್ಗವಾಗಿದೆ" ಎಂದು ಕೂಡಾ ಅವರು ದೂರಿದರು.
"ವಿದ್ಯಾರ್ಥಿಗಳಿಗೆ ನೀಡುವ ವಿವಿಧ ವಿದ್ಯಾರ್ಥಿವೇತನಗಳನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದ ಅವರು, ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ" ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ್ ದಾಸ್, ಎಸಿ ಜಯರಾಜ್, ಅಶ್ರಫ್ ಮತ್ತು ಹರೀಶ್ ಉಪಸ್ಥಿತರಿದ್ದರು.