ಸುಳ್ಯ, ಆ 25(SS): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡುವಿನ ತೆಕ್ಕಿಲ್ ಸಮುದಾಯ ಭವನದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದ ಜೋಡುಪಾಲ ಸಂತ್ರಸ್ತ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಪಟ್ಟವರನ್ನು ಕೊಡಗು ಜಿಲ್ಲೆಯ ಮೊಣ್ಣಂಗೇರಿ ಗ್ರಾಮದ ನಿವಾಸಿ ಅಂಗಾರ(60) ಎಂದು ಗುರುತಿಸಲಾಗಿದೆ.
ಆಶ್ರಯ ಕೇಂದ್ರದಲ್ಲಿ ಅಂಗಾರ ಅವರಿಗೆ ರಾತ್ರಿ 1 ಗಂಟೆ ಸುಮಾರಿಗೆ ತೀವ್ರವಾಗಿ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅಂಗಾರ ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ದಾರಿ ಮಧ್ಯೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೊಡಗಿನಲ್ಲಿ ನಡೆದಿರುವ ಘಟನೆಯಿಂದ ಸಾಕಷ್ಟು ನೊಂದಿದ್ದ ಅಂಗಾರ ಅವರಿಗೆ ಹೃದಯ ಸಂಬಂಧಿತ ಕಾಯಿಲೆ ಇತ್ತು. ತಕ್ಷಣಕ್ಕೆ ಅಂಗಾರ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕಿರಲಿಲ್ಲ. ಪರಿಣಾಮ, ಅಂಗಾರ ಸಾವನ್ನಪ್ಪಿದ್ದಾರೆ.