ವೇಣೂರು, ಮಾ. 20(DaijiworldNews/HR) : ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಶ್ರೀನಿವಾಸ ಗೌಡ ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಈ ಹಿಂದಿನ ಎಲ್ಲಾ ದಾಖಲೆಯನ್ನು ಪುಡಿ ಮಾಡಿ ಹೊಸ ದಾಖಲೆ ಬರೆದಿದ್ದಾರೆ.

ಕಂಬಳದ ಉಸೇನ್ ಬೋಲ್ಟ್ ಶ್ರೀ ನಿವಾಸ ಗೌಡರು ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ಕೋಣಗಳನ್ನು ಓಡಿಸಿ ಕೇವಲ 11.21 ಸೆಕೆಂಡ್ಸ್ ನಲ್ಲಿ ಗುರಿ ತಲುಪಿದ್ದು, 100 ಮೀಟರ್ ಗೆ ಹೋಲಿಸಿದಾಗ 8.96 ಸೆಕೆಂಡ್ಸ್ ನಲ್ಲಿ ಗುರಿ ತಲುಪಿದಂತಾಗಿದ್ದು, ಇದು ಹೊಸ ದಾಖಲೆಯಾಗಿದೆ ಎನ್ನಲಾಗಿದೆ.
ಇನ್ನು 2020ರಲ್ಲಿ ಐಕಳ ಕಂಬಳದಲ್ಲಿ ಶ್ರೀನಿವಾಸ ಗೌಡ ಅವರು 9.55 ಸೆಕೆಂಡ್ಸ್ ಗೆ ಗುರಿ ತಲುಪಿ ದಾಖಲೆ ಬರೆದಿದ್ದು, ಬಳಿಕ ಅಕ್ಕೇರಿ ಸುರೇಶ್ ಶೆಟ್ಟಿ 9.37 ಸೆಕೆಂಡ್, ಇರ್ವತ್ತೂರು ಆನಂದ 9.57 ಸೆಕೆಂಡ್ ನಲ್ಲಿ ಓಡಿಸಿ ದಾಖಲೆ ಮಾಡಿದ್ದರು.
ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಇದೀಗ ಹೊಸ ದಾಖಲೆ ಬರೆದಿದ್ದಾರೆ.