ದುಬೈ, ಆ 25(SS): ನಿರಂತರವಾಗಿ ಸುರಿದ ಮಳೆಯಿಂದಾಗಿ ಉಂಟಾದ ಪ್ರವಾಹವು ಕೇರಳದಲ್ಲಿ ಅಪಾರ ಹಾನಿ ಸೃಷ್ಟಿಸಿದ್ದು, ಶತಮಾನದ ದುರಂತ ಕಂಡ ಕೇರಳಕ್ಕೆ 175 ಟನ್ಗಳಷ್ಟು ಪರಿಹಾರ ಸಾಮಗ್ರಿಯನ್ನು ಸಾಗಿಸುವುದಾಗಿ ಯುಎಇ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೇಳಿದೆ.
ಕೇರಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಯುಎಇಯ ಹಲವು ಸಂಘ ಸಂಸ್ಥೆಗಳು ಹಾಗೂ ಉದ್ಯಮಿಗಳು ನೀಡಿರುವ ಪರಿಹಾರ ಸಾಮಗ್ರಿಗಳನ್ನು ಏರ್ ಕಾರ್ಗೋ ಸಂಸ್ಥೆಯ 12 ವಿಮಾನಗಳ ಮೂಲಕ ಕಳುಹಿಸಲಾಗುತ್ತದೆ. ಜೀವ ರಕ್ಷಕ ದೋಣಿಗಳು, ಹೊದಿಕೆಗಳು, ಒಣ ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ನೆರೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುವುದು ಎಂದು ಏರ್ಲೈನ್ಸ್ ಸಂಸ್ಥೆ ತಿಳಿಸಿದೆ.