ಕುಂದಾಪುರ, ಮಾ.20 (DaijiworldNews/MB) : ಬಾರ್ಕೂರು ಕಾಳಿಕಾಂಬಾ ದೇವಸ್ಥಾನದ ಸಭಾಭವನದ ಅಡುಗೆ ಕೋಣೆಯಲ್ಲಿ ಆರ್. ಟಿ. ಐ ಕಾರ್ಯಕರ್ತ ಶಂಕರ್ ಶಾಂತಿ ಎಂಬವರ ಮೇಲೆ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಆರೋಪ ಹೊತ್ತು, ಬ್ರಹ್ಮಾವರ ಪೊಲೀಸರಿಂದ ಬಂಧಿಸಲ್ಪಟ್ಟಿರುವ ನಾಲ್ಕು ಮಂದಿಗೆ ಜಾಮೀನು ಸಿಕ್ಕಿದೆ.

ಬಾರ್ಕೂರಿನ ಪ್ರವೀಣ ಆಚಾರ್ಯ, ನಿತೀನ್ ಕುಮಾರ್, ರಮೇಶ್ ಅಮೀನ್ ಹಾಗೂ ಶೇಖರ ಪೂಜಾರಿಯವರಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಜಾಮೀನು ನೀಡಿದೆ. ಹಾಗೆಯೇ ಬಂಧನದ ಭೀತಿ ಎದುರಿಸುತ್ತಿದ್ದ ಪ್ರಸಾದ ಆಚಾರ್ಯ, ದಿವಾಕರ ಆಚಾರ್ಯ ಹಾಗೂ ಮಂಜಪ್ಪ ಪೂಜಾರಿಯವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ಫೆಬ್ರವರಿ 20 ರಂದು ಬೆಳಿಗ್ಗೆ 9.30ರ ಹೊತ್ತಿಗೆ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಆರೋಪಿತರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 307 ರ ಅಡಿಯಲ್ಲಿ ಕೊಲೆಯತ್ನದ ದೂರು ದಾಖಲಾಗಿತ್ತು. ಆರೋಪಿಗಳ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.