ಮಂಗಳೂರು, ಆ 25(SS): ಭ್ರಷ್ಟಾಚಾರ ನಡೆಸುವ ಅಧಿಕಾರಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶ್ರಯ ಮಾಡಿಕೊಟ್ಟಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಹಿಂದುತ್ವ ಮತ್ತು ಭಾವನಾತ್ಮಕ ವಿಚಾರಗಳಿಗೆ ಕೈ ಹಾಕಿ ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ. ದೇಶದಲ್ಲಿರುವ ಯುವಕರಿಗೆ ಮೋದಿ ಉದ್ಯೋಗ ನಿರ್ಮಿಸಿ ಕೊಡಲಿಲ್ಲ. ಕಪ್ಪುಹಣವನ್ನು ಕೂಡ ದೇಶದ ಜನರಿಗೆ ತಂದು ಕೊಟ್ಟಿಲ್ಲ. ಕೇವಲ ಮಾತಿನಲ್ಲಿ ಜನರನ್ನು ನಂಬಿಸಿ ವಂಚನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ಬಿಜೆಪಿ ಸಂಸದರು ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯ ನೈಜ ಮುಖವನ್ನು ನಾವು ಅನಾವರಣಗೊಳಿಸುತ್ತೇವೆ. ಮುಂಬರುವ ಸ್ಥಳೀಯ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಮಾತ್ರವಲ್ಲ ಯಾವ ಪಕ್ಷವೂ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ನಮ್ಮದು ನಂಬರ್. 1 ಸಾಧನೆ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯ ಸೋಲಿನ ಬಗ್ಗೆ ನಾವು ಚಿಂತಿಸುವುದಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿನ ಅಭಿವೃದ್ಧಿ ಕೆಲಸಗಳು ನಮಗೆ ಶ್ರೀರಕ್ಷೆ. ಮುಂದೆ ನಾವು ಮಾಡಿದ ಸಾಧನೆಗಳು ನಮ್ಮ ಕೈ ಹಿಡಿಯುತ್ತದೆ. ಕರ್ನಾಟಕದಲ್ಲಿರುವ ಮೈತ್ರಿ ಸರ್ಕಾರ ಐದು ವರ್ಷಗಳ ಕಾಲ ಅಧಿಕಾರ ನಡೆಸುತ್ತದೆ. ಮೈತ್ರಿ ಒಪ್ಪಂದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಎಲ್ಲಾ ರೀತಿಯ ಸಭೆ, ತೀರ್ಮಾನಗಳ ಬಳಿಕ ಎಂಪಿ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ನಡೆಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ಏನೂ ಬೇಕಾದರೂ ನಡೆಯಬಹುದು. ಯಾರಿಂದಲೂ ಏನೂ ಹೇಳಲು ಸಾಧ್ಯವಿಲ್ಲ. ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಜನರು ಸೈ ಅನ್ನುತ್ತಾರೆ ಅನ್ನುವ ನಂಬಿಕೆ ನಮಗೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಈಗಲೂ ಗಟ್ಟಿಯಾಗಿದೆ. ಶವ ರಾಜಕೀಯಕ್ಕಿಂತಲೂ ಕೆಟ್ಟ ರೀತಿಯಲ್ಲಿ ಬಿಜೆಪಿ ಕೊಳಕು ರಾಜಕೀಯ ನಡೆಸುತ್ತಿದ್ದಾರೆ. ಇದೆಲ್ಲಾ ಜನರಿಗೆ ಗೊತ್ತಾಗದೇ ಇರುವುದಿಲ್ಲ. ಮುಂದೊಂದು ದಿನ ಖಂಡಿತ ಗೊತ್ತಾಗುತ್ತದೆ. ದೇಶಕ್ಕೆ ಮತ್ತು ರಾಜ್ಯಕ್ಕೆ ಬಿಜೆಪಿ ಪಕ್ಷದವರು ಏನು ಕೊಟ್ಟಿದ್ದಾರೆ..? ಏನನ್ನೂ ಕೊಟ್ಟಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ನಾನು ಮತ್ತೊಮ್ಮೆ ಸಿಎಂ ಆಗುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮತ್ತೊಮ್ಮೆ ಸಿಎಂ ಆಗುತ್ತೇನೆ ಎಂಬ ಹೇಳಿಕೆಯನ್ನು ಅವರು ಯಾವ ಕಾರಣಕ್ಕೆ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಅಧಿಕಾರದ ಯಾವ ಆಸೆ ಕೂಡ ಇಲ್ಲ. ಮುಂದಿನ ರಾಜಕೀಯ ದಾರಿ ಹೇಗಿರುತ್ತದೆ ಎಂದು ಗೊತ್ತಿಲ್ಲ ಎಂದು ಹೇಳಿದರು.