ಕುಂದಾಪುರ, ಮಾ.20 (DaijiworldNews/MB) : ಕುಂದಾಪುರ ತಾಲೂಕು ಕಛೇರಿಗೆ ಸಂಬಂಧಿಸಿದಂತೆ ಹಕ್ಕುಪತ್ರ, ಆರ್.ಟಿಸಿ ಇತ್ಯಾದಿ ಜನಸಾಮಾನ್ಯರ ಸಮಸ್ಯೆಗಳನ್ನು ತಕ್ಷಣ ಸರಿಪಡಿಸದಿದ್ದರೆ ನಾನು ತಾಲೂಕು ಕಛೇರಿಯಲ್ಲಿಯೇ ವಾಸ್ತವ್ಯ ಮಾಡುವುದಾಗಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಎಚ್ಚರಿಸಿದ್ದಾರೆ.















ಮಾ.20ರಂದು ಕುಂದಾಪುರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
''ಸಿದ್ಧಾಪುರ ಜಿ.ಪಂ.ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಹೊಸಂಗಡಿಯಲ್ಲಿ 2020ರಲ್ಲಿ ಅಂದಿನ ತಹಶೀಲ್ದಾರ್ ಹಕ್ಕುಪತ್ರ ಕೊಟ್ಟು ಈಗ ಡೀಮ್ಡ್ ಹಿನ್ನೆಲೆಯಲ್ಲಿ ಆರ್.ಟಿಸಿ ರದ್ದು ಮಾಡಲಾಗಿದೆ. 2020ರ ಡೀಮ್ಡ್ ಪರಿಷ್ಕರಣೆ ಇನ್ನೂ ಆಗಿಲ್ಲ. ಗ್ರಾಮೀಣ ಭಾಗದ ಜನರಿಗೆ ಸಮಸ್ಯೆಯಾಗುತ್ತದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಆನಂದಪ್ಪ ನಾಯಕ್ ಯಾವುದೇ ಹಕ್ಕುಪತ್ರ ರದ್ದು ಮಾಡಿಲ್ಲ ಎಂದರು. ಆಗ ಶಾಸಕರು ಮಾತನಾಡಿ ಸಾಮಾನ್ಯ ಜನರ ನೋವನ್ನು ಪರಿಹರಿಸಿ. ಆಶ್ವಾಸನೆ ಕೊಡಬೇಡಿ. ನಂತರ ರದ್ದು ಮಾಡುವುದಾರೆ ಮುಂಚೆ ಗೊತ್ತಿಲ್ಲವೇ? ಇದು ಇಡೀ ತಾಲೂಕಿನ ಸಮಸ್ಯೆ. ತಾಲೂಕು ಕಛೇರಿಯಲ್ಲಿ ಚುರುಕಿನಿಂದ ಕೆಲಸ ಆಗಬೇಕು. ಅನಾವಶ್ಯಕವಾಗಿ ಜನರಿಗೆ ಸಮಸ್ಯೆ ತಂದೊಡ್ಡಬೇಡಿ. 50-60ವರ್ಷದಿಂದ ಜನ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಆ ಜನರ ನೋವು ಅರ್ಥ ಮಾಡಿಕೊಳ್ಳಿ'' ಎಂದರು.
ಸರ್ಕಾರಿ ಆಸ್ಪತ್ರೆ ಕಳಪೆ ನಿರ್ವಹಣೆ
''ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ನಿರ್ವಹಣೆ ಅತ್ಯಂತ ಕಳೆಪೆಯಾಗಿದೆ ಎನ್ನುವ ದೂರುಗಳು ಬರುತ್ತಿವೆ. ಡಾ|ಜಿ.ಶಂಕರ್ ಅವರು ನಿರ್ಮಿಸಿಕೊಟ್ಟಿರುವ ಹೆರಿಗೆ ಆಸ್ಪತ್ರೆಯ ಶುಚಿತ್ವ, ನಿರ್ವಹಣೆಯ ಬಗ್ಗೆ ಜಿ.ಶಂಕರ್ ಅವರೇ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕುಂದಾಪುರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಷ್ಟೊಂದು ವ್ಯವಸ್ಥಿತವಾಗಿ, ಶುಚಿತ್ವದಿಂದ ಕಾರ್ಯನಿರ್ವಹಿಸುತ್ತಿವೆ. ಹಾಗಿರುವಾಗ ತಾಲೂಕು ಆಸ್ಪತ್ರೆಯ ಬಗ್ಗೆ ಜನ ಮಾತನಾಡಿಕೊಳ್ಳುವಂತಾಗಿದೆ'' ಎಂದು ಶಾಸಕರು ವೈದ್ಯಾಧಿಕರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡರು.
''ಜಿ.ಪಂ.ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ಮಾತನಾಡಿ ತಾಲೂಕು ಆಸ್ಪತ್ರೆಯಲ್ಲಿ ಮಾದ್ಯಮ ನಿರ್ಬಂಧ ವಿಧಿಸಲಾಗಿದೆ. ಇದು ಸರಿಯೇ? ''ಎಂದು ಪ್ರಶ್ನಿಸಿದರು.
''ಇದನ್ನು ವೈದ್ಯಾಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾ ವೈದ್ಯರ ಕರ್ತವ್ಯದ ವೇಳೆ ಚಿತ್ರೀಕರಣಕ್ಕೆ ಅವಕಾಶವಿಲ್ಲ'' ಎಂದರು. ''ಮಾಧ್ಯಮಗಳು ಎಚ್ಚರಿಸುವ ಕೆಲಸ ಮಾಡುತ್ತಿವೆ. ಸರ್ಕಾರಿ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದು ಸರಿಯಲ್ಲ, ಈ ಬಗ್ಗೆ ಚರ್ಚೆಯಾಗಬೇಕು'' ಎಂದು ಆಗ್ರಹಿಸಿದರು.
''ಮರಳುಗಾರಿಕೆ ಕುಂದಾಪುರದಲ್ಲಿ ಆರಂಭಗೊಂಡಿದ್ದು ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬೇಕಾಗಿದ್ದು ಎರಡುವರೆ ಯೂನಿಟ್ ಸಿಹಿ ನೀರು ಮರಳಿಗೆ 6500 ರೂ ಆಗಲಿದೆ'' ಎಂದು ಗಣಿ ಅಧಿಕಾರಿಗಳು ಮಾಹಿತಿ ನೀಡಿದರು.
''ಪಡಿತರದಾರರಿಗೆ ಬೆಳ್ತಿಗೆ ಅಕ್ಕಿ ನೀಡಬೇಕು'' ಎಂದು ಜಿಪಂ.ಸದಸ್ಯೆ ಗೌರಿ ದೇವಾಡಿಗ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಜಿ.ಪಂ. ಸದಸ್ಯ ಬಾಬು ಶೆಟ್ಟಿ, ''ಈಗಾಗಲೇ ಉಡುಪಿ ಜಿಲ್ಲೆಗೆ ಸ್ಥಳೀಯ ಕೊಚ್ಚಲು ಅಕ್ಕಿ ನೀಡುವಂತೆ ನಿರ್ಣಯ ಮಾಡಲಾಗಿದೆ'' ಎಂದರು.
ಬಾಬು ಶೆಟ್ಟಿ ಮಾತನಾಡಿ, ''ಭಾಗ್ಯಲಕ್ಷ್ಮೀ ಯೋಜನೆಯಡಿ ಗೊಂದಲಗಳಿದ್ದು ಮಗುವಿನ ತಂದೆ ಮನೆ ಮತ್ತೆ ತಾಯಿ ಮನೆ ಬೇರೆಯಾಗಿರುವುದರಿಂದ ಅವರವರ ಮನೆಯ ಪಡಿತರ ಚೀಟಿಯಲ್ಲಿ ಹೆಸರಿರುತ್ತದೆ. ಇದು ಸಮಸ್ಯೆಯಾಗುತ್ತಿದೆ'' ಎಂದರು.
ಶ್ರೀಲತಾ ಸುರೇಶ ಶೆಟ್ಟಿ, ''ಮನೆಗೆ ವಿದ್ಯುತ್ ಸಂಪರ್ಕಕ್ಕೆ ಗ್ರಾಮ ಪಂಚಾಯತಿ ನಿರಪೇಕ್ಷಣಾ ಪತ್ರ ಕೇಳಲಾಗುತ್ತದೆ'' ಎಂದು ದೂರಿದರು. ಇದಕ್ಕೆ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ''ಮನೆಗೆ ವಿದ್ಯುತ್ ಸಂಪರ್ಕಕ್ಕೆ ಗ್ರಾಮ ಪಂಚಾಯತಿ ಎನ್.ಓ.ಸಿ ಅಗತ್ಯವಿಲ್ಲ'' ಎಂದರು. ಜಿ.ಪಂ.ಸದ್ಯಸರಾದ ಸುರೇಶ ಬಟ್ಟವಾಡಿ, ಶಂಕರ ಪೂಜಾರಿ, ಬೈಂದೂರು ತಾ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಮಾತನಾಡಿದರು.
ಕುಂದಾಪುರ ತಾ.ಪಂ.ಅಧ್ಯಕ್ಷೆ ಇಂದಿರಾ ಶೆಟ್ಟಿ, ಉಪಾಧ್ಯಕ್ಷ ರಾಮ ಕಿಶನ್ ಹೆಗ್ಡೆ, ಬೈಂದೂರು ತಾ.ಪಂ.ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷೆ ಮಾಲಿನಿ ಕೆ., ಜಿ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ.ಪುತ್ರನ್, ಕುಂದಾಪುರ ತಾ,ಪಂ.ಕಾರ್ಯನಿರ್ವಹಣಧಿಕಾರಿ ಕೇಶವ ಶೆಟ್ಟಿಗಾರ್, ಬೈಂದೂರು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭಾರತಿ ಉಪಸ್ಥಿತರಿದ್ದರು.