ಮಂಗಳೂರು, ಆ 25(SS): ನಗರದಲ್ಲಿರುವ ಅನೇಕ ಸಂಚಾರಿ ಪೊಲೀಸರ ಕಣ್ಣು ತಪ್ಪಿಸಿ ಪಾರಾಗಲು ಯತ್ನಿಸಿದ ಕೇರಳದ ಉದುಮ ನಿವಾಸಿಗಳನ್ನು ಕದ್ರಿ ಸಂಚಾರಿ ಪೊಲೀಸರು ತಡೆದು ನಿಲ್ಲಿಸಿ ಸಾಹಸ ಮೆರೆದಿದ್ಧಾರೆ.
ಕೇರಳದ ಉದುಮದಿಂದ ಬಂದ KL 14P 4758 ನಂಬರ್ ಕಾರೊಂದು ಪಂಪ್ವೆಲ್ ಮಾರ್ಗವಾಗಿ ಮಂಗಳೂರು ನಗರ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಸಂಚಾರಿ ಪೊಲೀಸರು ಕಾರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಪೊಲೀಸರು ತಡೆಯಲು ಯತ್ನಿಸಿದರೂ ನಿಲ್ಲಿಸದೇ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಕಾರು ಚಾಲಕ ಜ್ಯೋತಿ ವೃತ್ತ ದಾಟಿ ಬಂಟ್ಸ್ ಹಾಸ್ಟೆಲ್ ಮೂಲಕ ಪಿವಿಎಸ್ ತಲುಪಿದ್ದಾನೆ.
ಪಿವಿಎಸ್ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಸಂಚಾರಿ ಪೊಲೀಸರೂ ಕೂಡ ಕಾರನ್ನು ತಡೆಯಲು ಯತ್ನಿಸಿ ವಿಫಲರಾಗಿದ್ದಾರೆ. ಬಳಿಕ ಅಲ್ಲಿಂದ ಮುಂದೆ ಸಾಗಿದ ಕಾರು ಲಾಲ್ ಭಾಗ್ ನಲ್ಲಿರುವ ಸಂಚಾರಿ ಪೊಲೀಸರ ಕಣ್ಣು ತಪ್ಪಿಸಿ ಕದ್ರಿಗೆ ತಲುಪಿದೆ.
ಕೇರಳದಿಂದ ಬಂದ ಕಾರು ಕದ್ರಿ ಸರ್ಕ್ಯೂಟ್ ಹೌಸ್ ತಲುಪುತ್ತಿದ್ದಂತೆ ಸಂಚಾರಿ ಪೊಲೀಸರಾದ ಗಜೇಂದ್ರ ಮತ್ತು ನಾರಪ್ಪ ಅಲರ್ಟ್ ಆಗಿದ್ದು, ಬ್ಯಾರಿಕೇಡ್ ಹಾಕಿ ಕಾರನ್ನು ತಡೆಯಲು ಯತ್ನ ನಡೆಸಿದ್ದಾರೆ. ಈ ವೇಳೆ ಗಜೇಂದ್ರ ಮತ್ತು ನಾರಪ್ಪ ಅವರ ಮಾತು ಲೆಕ್ಕಿಸದೇ ಬ್ಯಾರಿಕೇಡ್ ಮುರಿದು ಕಾರನ್ನು ನುಗ್ಗಿಸಲು ಚಾಲಕ ಪ್ರಯತ್ನಿಸಿದ್ದಾನೆ. ಆದರೆ ಕಾರು ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ಹೇಗಾದರೂ ಸಾಹಸ ಮೆರೆದು ಗಜೇಂದ್ರ ಮತ್ತು ನಾರಪ್ಪ ಕಾರನ್ನು ತಡೆದು ನಿಲ್ಲಿಸಿ, ಕಾರಿನಲ್ಲಿದ್ದ ಯುವಕ ಮತ್ತು ಯುವತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ವೇಳೆ ಸಂಚಾರಿ ಪೊಲೀಸರಾದ ಗಜೇಂದ್ರ ಮತ್ತು ನಾರಪ್ಪ ಅವರಿಗೆ ಗಂಭೀರ ಗಾಯಗಳಾಗಿದೆ. ಗಂಜೇಂದ್ರ ಅವರಿಗೆ ಹೆಚ್ಚಿನ ಗಾಯಗಳಾಗಿದ್ದರೆ, ನಾರಪ್ಪ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿರುವ ಯುವಕ-ಯುವತಿ ಯಾರು..? ಯಾಕಾಗಿ ಮಂಗಳೂರಿಗೆ ಪೊಲೀಸರ ಕಣ್ಣು ತಪ್ಪಿಸಿ ಆಗಮಿಸಿದ್ದರು..? ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.