ಕಾರವಾರ, ಆ 25(SS): ನಾವು ದೇಹ ಮಾರಿ ಇಲ್ಲಿ ಬದುಕುತ್ತಿಲ್ಲ. ನಾವೂ ಕೂಡ ನಿಮ್ಮಂತೆ ಮನುಷ್ಯರು. ನಮಗೂ ಇಲ್ಲಿ ನಿಮ್ಮಂತೆ ಬದುಕಲು ಬಿಡಿ ಎಂದು ಮಂಗಳಮುಖಿಯರು ಕಣ್ಣೀರಿಟ್ಟು ಬೇಡಿಕೊಂಡಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೊನ್ನಾವರದ ಮಂಗಳಮುಖಿಯರು, ನಮ್ಮ ಜೀವನ ರೂಪಿಸಿಕೊಳ್ಳಲು ನಮಗೊಂದು ಸೂರು ನಿರ್ಮಿಸಿ ಕೊಡಿ. ನಮಗೂ ಕೂಡ ನಿಮ್ಮಂತೆ ಬದುಕುವ ಹಕ್ಕಿದೆ. ನಾವು ಇಲ್ಲಿ ದೇಹ ಮಾರಿ ಬದುಕುತ್ತಿಲ್ಲ. ನಮ್ಮಲ್ಲೂ ನಿಮ್ಮಂತೆ ಕನಸುಗಳಿದೆ. ಬದುಕುವ ಆಸೆಗಳಿದೆ. ನಮಗೂ ಅವಕಾಶ ಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.
ಈ ವೇಳೆ ನಟಿ ಹಾಗೂ ರೇಡಿಯೊ ಜಾಕಿಯಾಗಿರುವ ಮಂಗಳಮುಖಿ ಕಾಜಲ್ ಮಾತನಾಡಿ, ನಮಗೆಂದು ಸರಕಾರದಿಂದ ಹಲವು ಯೋಜನೆಗಳು ಜಾರಿಯಾಗಿವೆ. ಆದರೆ ನಮ್ಮ ಸಮುದಾಯದವರಿಗೆ ಮಾಹಿತಿ ಕೊರತೆಯಿದೆ. ಪರಿಣಾಮ ಸರಕಾದಿಂದ ಜಾರಿಯಾದ ಯೋಜನೆಗಳು ನಮಗೆ ದೊರಕುತ್ತಿಲ್ಲ ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮಂಗಳ ಮುಖಿಯರಿಗೆ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಇತರ ಯಾವ ಸವಲತ್ತುಗಳು ದೊರೆತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಾಗೂ ನಾನಾ ಯೋಜನೆಯಡಿ ಸ್ವ ಉದ್ಯೋಗಕ್ಕಾಗಿ 50 ಸಾವಿರ ಹಣ ಸರಕಾರದಿಂದ ನೀಡುತ್ತಾರೆ. ಆದರೆ ಸರಕಾರದ ಹಲವು ಯೋಜನೆಗಳು ನಮ್ಮವರಿಗೆ ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ನಾವು ಹೊನ್ನಾವರದಲ್ಲಿ ಕಳೆದ ಎಂಟು ವರ್ಷಗಳಿಂದ ಬದುಕುತ್ತಿದ್ದೇವೆ. ಮನೆ ಬಾಡಿಗೆ ಸಿಗದೆ ಲಾಡ್ಜ್ವೊಂದರಲ್ಲಿ ಮೂರು ವರ್ಷ ಬದುಕು ಸಾಗಿಸಿದ್ದೆವು. ಬಾಡಿಗೆ ಮನೆ ಸಿಕ್ಕಾಗ ಅಕ್ಕಪಕ್ಕದವರು ತೊಂದರೆ ಕೊಟ್ಟು ಬಿರು ಮಳೆಯಲ್ಲಿ ಮನೆ ಬಿಡಿಸಿ ಹೊರ ನೂಕಿದ್ದರು. ಈಗ ನಮಗೆ ಸ್ವಂತ ಮನೆ ಬೇಕಿದೆ. ಇಲ್ಲಿವರೆಗೂ ಮತದಾನದ ಹಕ್ಕು ನಮಗೆ ಸಿಕ್ಕಿಲ್ಲ. ಅಧಿಕಾರಿಗಳು ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.