ಮಂಗಳೂರು, ಅಕ್ಟೋಬರ್ 3: ಕಣ್ಣೂರಿನಲ್ಲಿ ಐತಿಹಾಸಿಕ ತಳಿಪರಂಬ ರಾಜರಾಜೇಶ್ವರಿ ದೇವಾಲಯಕ್ಕೆ ಬೇಟಿ ಮಾಡಿ ಪೂಜೆ ಸಲ್ಲಿಸಿದ ಅಮಿತ್ ಶಾ ನಂತರ ಪಯ್ಯನೂರಿನಲ್ಲಿ 'ಜನರಕ್ಷಾ ಯಾತ್ರೆ'ಗೆ ಚಾಲನೆ ನೀಡಿದರು.
ಕೇರಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಆರ್.ಎಸ್.ಎಸ್ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿ 'ಜನರಕ್ಷಾ ಯಾತ್ರೆ' ಹೆಸರಿನಲ್ಲಿ ಕೇರಳದ ಬಿಜೆಪಿ ಘಟಕ ಈ ಬೃಹತ್ ಪಾದಯಾತ್ರೆ ಆಯೋಜಿಸಿದೆ. ಪೂಜೆ ಸಲ್ಲಿಸಿದ ನಂತರ ಪಯ್ಯನೂರು ನಗರ ವೃತ್ತದಲ್ಲಿ ಕೊಲೆಯಾದ ಬಿಜೆಪಿ ಮತ್ತು ಆರ್.ಎಸ್.ಎಸ್ ಕಾರ್ಯಕರ್ತರ ಭಾವಚಿತ್ರಗಳ ಪ್ರದರ್ಶನವನ್ನು ಅಮಿತ್ ಶಾ ಉದ್ಘಾಟಿಸಿದರು. ಆ ಬಳಿಕ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಶಾ , ಕೇರಳದ ಎಡರಂಗ ಸರ್ಕಾರದ ವಿರುದ್ದ ಹರಿಹಾಯ್ದರು. ಕೇರಳದಲ್ಲಿ , ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದ್ದು , ಇವೆಲ್ಲದಕ್ಕೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ನೇರ ಹೊಣೆ ಎಂದು ಕಿಡಿಕಾರಿದರು. 2001 ರ ಬಳಿಕ ಸುಮಾರು 120 ಮಂದಿ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದೆ.ಇವೆಲ್ಲದರ್ ಹಿಂದೆ ಸಿಪಿಐ(ಎಮ್) ನ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
" ನಾನು ಕೇರಳದ ಮುಖ್ಯಮಂತ್ರಿಯ ಎದುರು ಪ್ರಶ್ನೆಯೊಂದನ್ನು ಮುಂದಿಡುತ್ತಿದ್ದೇನೆ, ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯ ಸಂಚುಕೋರರು ಯಾರೆಂದು ಹೇಳಲಿ ಇಲ್ಲವಾದಲ್ಲಿ, ಇದೆಲ್ಲದಕ್ಕೂ ಪಿಣರಾಯಿ ವಿಜಯನ್ ಹೊಣೆಗಾರರೆಂದು ಒಪ್ಪಿಕೊಳ್ಳಲಿ" ಎಂದು ಸವಾಲೆಸೆದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತವರು ನೆಲದಲ್ಲಿ ಸುಮಾರು 84 ಮಂದಿ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದೆ. ಹೀಗಾಗಿ ಪಿಣರಾಯಿ ಅವರ ತವರು ನೆಲವಾದ ಕಣ್ಣೂರಿನಿಂದಲೇ ಈ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿದ್ದೇನೆ ಎಂದು ಹೇಳಿದರು.
15 ದಿನಗಳ ಪಾದಯಾತ್ರೆ ಇಂದು ಚಾಲನೆ ಸಿಕ್ಕಿ ,ಅಕ್ಟೋಬರ್ 17ರಂದು ಪಾದಯಾತ್ರೆ ರಾಜಧಾನಿ ತಿರುವನಂತಪುರಂನಲ್ಲಿ ಸಮಾರೋಪಗೊಳ್ಳಲಿದೆ. ಒಟ್ಟು 15 ದಿನಗಳ ಯಾತ್ರೆ ಇದಾಗಿದ್ದು ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಹಲ್ಲೆ ಖಂಡಿಸಿ ಕೇರಳದ ಬಿಜೆಪಿ ಘಟಕ ಈ ಪಾದಯಾತ್ರೆ ಆಯೋಜಿಸಿದೆ.