ಕಾರ್ಕಳ, ಆ 26(AB): ಕಳೆದ ವಿಧಾನಸಭಾ ಚುನಾವಣಾ ವೇಳೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ, ಪಕ್ಷ ವಿರೋಧ ಚಟುವಟಿಕೆ ನಡೆಸಿದ ಹರ್ಷ ಮೊಯ್ಲಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಧೈರ್ಯ ತೋರದೆ, ಕಾರ್ಕಳದಲ್ಲಿ ಕಾಂಗ್ರೆಸ್ನ ಯುಗಾಂತ್ಯಕ್ಕೆ ಮುಂದಾಗಿರುವ ಮುಖಂಡರು ನನ್ನನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ.ಆ ಮೂಲಕ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬಿಡಲಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ಮೊಹಮ್ಮದ್ ಶರೀಫ್ ಆರೋಪಿಸಿದ್ದಾರೆ.
ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಹಾನಿ ಮಾಡಿದ ಹರ್ಷ ಮೊಯ್ಲಿ ಅವರಿಗೆ ವಕ್ತಾರ ಹುದ್ದೆ ನೀಡಿ ಗೌರವಿಸಲಾಗಿತ್ತು. ಕಳೆದ ವಿಧಾನ ಪರಿಷತ್ ಚುನಾವಣೆ ಸಂದರ್ಭ ಪಕ್ಷೇತರ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೆ ಬೆಂಬಲಿಸಿದ ಪುರಸಭೆ ಸದಸ್ಯ ಶುಭದ ರಾವ್ ಅವರ ವಿರುದ್ದ, ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಕ್ಷಯ್ ರಾವ್ ವಿರುದ್ದ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಅಷ್ಟು ಮಾತ್ರವಲ್ಲದೆ ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭ ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡು ಕಾಂಗ್ರೆಸನ್ನು ಸೋಲಿಸಿದ ಜಿ.ಎ.ಬಾವ ಅವರನ್ನು ಕೂಡಾ ಪಕ್ಷದಿಂದ ಉಚ್ಚಾಟಿಸಲಿಲ್ಲ. ಪಕ್ಷಕ್ಕೆ ಬಹಿರಂಗ ಸವಾಲು ನೀಡುತ್ತಿರುವ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನೇಮಿರಾಜ ರೈ, ಪ್ರತ್ಯೇಕ ಬೆಂಬಲಿಗರನ್ನು ಹೊಂದಿದ ಜಿಲ್ಲಾ ಉಪಾಧ್ಯಕ್ಷ ಉದಯ ಶೆಟ್ಟಿ ಅವರ ವಿರುದ್ದ ಕಾಂಗ್ರೆಸ್ಗೆ ಯಾವ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ? ಕೇವಲ ನನ್ನನ್ನು ಮಾತ್ರ ಉಚ್ಚಾಟಿಸುವ ಮೂಲಕ ಮುಸ್ಲಿಂ ವಿರೋಧಿ ಕಾಂಗ್ರೆಸ್ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಅವರು ಆರೋಪಿಸಿದ್ದಾರೆ.