ಮಂಗಳೂರು, ಆ 27 (MSP) : ಮಳೆಯ ಆರ್ಭಟ ಕಡಿಮೆಯಾದರೂ, ಬೆಟ್ಟಗಳೇ ಕುಸಿದು ಊರು ಸಮಾಧಿಯಾಗುವ ಭಯ ಬೆಟ್ಟದ ತಪ್ಪಲಲ್ಲಿ ವಾಸಿಸುವ ಜನರಿಗೆ ಕಡಿಮೆಯಾಗಿಲ್ಲ. ಒಂದು ಸಣ್ಣ ಶಬ್ದವಾದರೂ ಬೆಚ್ಚಿ ಬೀಳುವ ಸರದಿ ಇಲ್ಲಿನ ನಿವಾಸಿಗಳದ್ದು. ಇನ್ನೊಂದೆಡೆ ಪಶ್ಚಿಮ ಘಟ್ಟಗಳ ಶ್ರೇಣಿಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮತ್ತೊಮ್ಮೆ ಭೂ-ಕುಸಿತವಾಗುವ ಆತಂಕ ಕಾಡತೊಡಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಕೊಡಗಿನ ಗಡಿಭಾಗದ ಗಾಳಿಬೀಡು, ವಣಚ್ಚಲ್ ಬೆಟ್ಟಗಳ ತುದಿಯಲ್ಲಿ ಭಾರೀ ಬಿರುಕು ಬಿಟ್ಟಿದ್ದಲ್ಲದೆ, ಹಲವು ಎಕರೆಗಟ್ಟಲೇ ಭೂ-ಕುಸಿತವಾಗಿರುವುದು ಬೆಳಕಿಗೆ ಬಂದಿದೆ. ಇವೆಲ್ಲವೂ ಪ್ರಕೃತಿ ಮೇಲಿನ ಮಾನವ ದಬ್ಬಾಳಿಕೆಯ ಸಂಕೇತವಾಗಿ, ಮುಂದಿರುವ ಗಂಡಾಂತರದಂತೆ ಕಾಣಿಸುತ್ತಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಕೈ ಜೋಡಿಸಿರುವ ತಂಡವೊಂದು ಭೂಕುಸಿತದಿಂದ ಆಹಾರ ಇಲ್ಲದೆ ಕಂಗಾಲಾಗಿದ್ದ ಸಾಕು ಪ್ರಾಣಿಗಳನ್ನು ಸುರಕ್ಷಿತವಾಗಿ ವಾಪಾಸು ಕರೆತರಲು ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ ಗಣೇಶ್ ಮತ್ತು ಕೆಲ ಸ್ವಯಂ ಸೇವಕರ ತಂಡ ಪಶ್ಚಿಮಘಟ್ಟದ ಕೆಲ ಪ್ರದೇಶಗಳತ್ತ ತೆರಳಿತ್ತು. ಆದರೆ ಪರ್ವತಗಳಲ್ಲಿ ಹಲವೆಡೆ ಅಪಾಯಕಾರಿಯಾಗಿ ಭೂಮಿ ಬಾಯ್ದೆರೆದಿರುವುದು ಕಂಡು ಬೆಚ್ಚಿ ಬಿದ್ದಿದೆ ಈ ತಂಡ . ಹೀಗಾಗಿ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಮತ್ತಷ್ಟು ಭೂಕುಸಿತವಾಗುವ ಸಾಧ್ಯತೆ ಇದೆ.
ಗಾಳಿಬೀಡು ಹಾಗು ಪಕ್ಕದ ವಣಚ್ಚಲ್ ಬೆಟ್ಟದಲ್ಲಿ ಭಾರೀ ಬಿರುಕು ಕಂಡಿದೆ . ಅದಲ್ಲದೇ ಪರ್ವತ ಶ್ರೇಣಿಗಳ ನಡುವೆ ಎಕರೆಗಟ್ಟಲೆ ಭೂಮಿ ಕುಸಿದಿರುವ ಭೀಕರ ದೃಶ್ಯ ಕಂಡು ಈ ತಂಡ ಬೆಚ್ಚಿ ಬಿದ್ದಿದೆ. ಅತೀ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲ್ಪಟ್ಟ ಪಶ್ಚಿಮ ಘಟ್ಟದಲ್ಲಿ ಮುಂದೆಯೂ ಭೂಕುಸಿತವಾಗುವ ಲಕ್ಷಣಗಳು ಕಂಡು ಬಂದಿದ್ದು ರಕ್ಷಣಾ ತಂಡ ಆತಂಕ ವ್ಯಕ್ತಪಡಿಸಿದೆ.