ಮಂಗಳೂರು, ಆ 27 (MSP) : ರಫೇಲ್ ಡೀಲ್ ನಲ್ಲಿ ನಡೆದ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಭಾಗಿಯಾಗಿದ್ದಾರೆ ಎಂದು ಎಐಸಿಸಿಯ ರಾಷ್ಟೀಯ ವಕ್ತಾರ ಜೈವೀರ್ ಶೆರ್ಗಿಲ್ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆ 27ರ ಸೋಮವಾರ ಪತ್ರಿಕಾಗೋಷ್ಟಿಯನ್ನು ನಡೆಸಿ ಮಾತನಾಡಿದ ಅವರು, ಭ್ರಷ್ಟಾಚಾರದಿಂದ ತಮ್ಮ ಹೊಟ್ಟೆಯನ್ನು ತುಂಬಿಸಿದ ಬಳಿಕ ಬಿಜೆಪಿ ಗಾಢವಾದ ನಿದ್ರೆಯಲ್ಲಿದೆ. ಘೋಷಣೆ ಮೂಲಕ ಭ್ರಷ್ಟಾಚಾರ ಮುಕ್ತ ದೇಶ ಎಂದು ಹೇಳುವ ಬಿಜೆಪಿ ರಫೇಲ್ ಡೀಲ್ ಎಂಬ ದೊಡ್ಡ ಹಗರಣದಲ್ಲಿ ಭಾಗಿಯಾಗಿದೆ. ಈ ಹಗರಣದಿಂದಾಗಿ 1.60 ಲಕ್ಷ ಕೋಟಿಯಷ್ಟು ಕರ್ನಾಟಕಕ್ಕೆ ನಷ್ಟವಾಗಿದೆ ಎಂದು ಹೇಳಿದ್ದಾರೆ
ಭಾರತದ ಬೊಕ್ಕಸಕ್ಕೆ 41,205 ಕೋಟಿ ರೂ. ನಷ್ಟಕ್ಕೆ ಕಾರಣವಾಗಲಿರುವ ಬಿಜೆಪಿಯ ರಫೇಲ್ ಒಪ್ಪಂದ ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿಯ ಮೂಲಕ ತನಿಖೆಯಾಗಬೇಕು. ಪಾರದರ್ಶಕ ಆಡಳಿತಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಈ ಒಪ್ಪಂದ ವಿರುದ್ಧವಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ನ ವಕ್ತಾರ ಜೈವೀರ್ ಶೇರ್ಗಿಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ
126 ಯುದ್ದ ವಿಮಾನಗಳ ಖರೀದಿ ಮತ್ತು ಅವುಗಳ ನಿರ್ವಹಣೆಯನ್ನು ಎಚ್ಎಎಲ್ನ ಸಂಸ್ಥೆಯಿಂದ ಕಿತ್ತುಕೊಂಡು ಪ್ರಧಾನಿ ಸ್ನೇಹಿತ ಅನಿಲ್ ಅಂಬಾನಿ ಒಡೆತನದ ರಿಲೆಯನ್ಸ್ ಕಂಪನಿಗೆ ನೀಡಲಾಗಿದೆ. ಹೀಗಾಗಿ ಈ ಹಗರಣ ಕರ್ನಾಟಕದಲ್ಲಿ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯಂತಹ ಅವಕಾಶವನ್ನು ಕಿತ್ತುಕೊಂಡಿದೆ ಎಂದು ಹೇಳಿದರು.
2012ರಲ್ಲಿ ಯುಪಿಎ ಸರಕಾರದ ಆಡಳಿತದ ಅವಧಿಯಲ್ಲಿ 36 ವಿಮಾನಗಳ ಬೆಲೆ 18,940 ಕೋಟಿ ರೂ. ಎಂದು ನಿಗದಿಪಡಿಸಲಾಗಿತ್ತು. ನಂತರ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ 2015ರಲ್ಲಿ ಪ್ಯಾರೀಸ್ಗೆ ಭೇಟಿ ನೀಡಿ, 36 ವಿಮಾನಗಳನ್ನು ಖರೀದಿಸುವ ಬಗ್ಗೆ ಘೋಷಿಸಿದರು. ಇದರ ಬೆಲೆ 41,205 ಕೋಟಿ ರೂ.ಗಳೆಂದು ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ ಪತ್ರಿಕಾ ಹೇಳಿಕೆಯ ಮೂಲಕ ಬಹಿರಂಗಪಡಿಸಿದೆ. ಹೆಚ್ಚು ಹಣ ನೀಡಿ ಫ್ರಾನ್ಸ್ನಿಂದ ವಿಮಾನಗಳನ್ನು ಖರೀದಿಸುವ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟವಾದ ಉತ್ತರವನ್ನು ನೀಡಿಲ್ಲ. ಾಲ್ಲದೆ ರಕ್ಷಣಾ ಸಂಪುಟ ಸಮಿತಿಯ ಕಡ್ಡಾಯ ಪೂರ್ವ ಅನುಮೋದನೆ ಪಡೆದಿರಲಿಲ್ಲ ಎಂದು ಆರೋಪಿಸಿದರು. ಹೀಗಾಗಿ ರಫೇಲ್ ಹಗರಣದವೂ ಜಂಟಿ ಸಂಸದೀಯ ಸಮಿತಿಯ ಮೂಲಕ ತನಿಖೆಯಾಗಬೇಕು. ಈ ಬೇಡಿಕೆ ಈಡೇರುವವರೆಗೆ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಮಾಧ್ಯಮ ಸಂಚಾಲಕ ಸಂಜಯ್ ಸಿಂಗ್, ಜಿಲ್ಲಾ ವಕ್ತಾರ ವಿನಯ ರಾಜ್, ಟಿ.ಕೆ. ಸುಧೀರ್, ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.