ಬೆಂಗಳೂರು, ಆ 27(SM): ಗಾಂಜಾ ಪರವಾದ ಹಾಡು ಬರೆದಿರುವ ಕಾರಣ ಕನ್ನಡದ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಗಾಂಜಾ ಪರವಾದ ಹಾಡು ಬರೆದಿರುವುದರಿಂದ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಸ್ಯಾಂಡಲ್ ವುಡ್ ಸಿನಿಮಾವೊಂದಕ್ಕೆ ಚಂದನ್ ಶೆಟ್ಟಿ ಮಾಡಿದ ಹಾಡೊಂದು ಇದೀಗ ಬೆಂಗಳೂರಿನ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ. ಹಾಡಿನಲ್ಲಿ ಗಾಂಜಾ ಮತ್ತು ಇತರ ಮಾದಕ ದ್ರವ್ಯಗಳ ಪರವಾದ ಸಾಹಿತ್ಯ ಇರುವುದರಿಂದಾಗಿ ಸಮಾಜಕ್ಕೆ ಹಾಡು ತಪ್ಪು ಸಂದೇಶ ನೀಡುತ್ತದೆ. ಇದಕ್ಕಾಗಿಯೇ ಪೊಲೀಸರು ಗರಂ ಆಗಿದ್ದಾರೆ.
ಮಾದಕ ದ್ರವ್ಯ ತಡೆ ವಿಭಾಗದ ಪೊಲೀಸರು ಚಂದನ್ ಶೆಟ್ಟಿಗೆ ನೊಟೀಸ್ ನೀಡಿದ್ದು, ಖುದ್ದು ವಿಚಾರಣೆ ಎದುರಿಸುವಂತೆ ಸೂಚಿಸಿದ್ದಾರೆ. ಸುಮಾರು 3 ವರ್ಷಗಳ ಹಿಂದೆ 2015ರಲ್ಲಿ ತೆರೆ ಕಂಡಿದ್ದ ಅಂತ್ಯ ಚಿತ್ರದ ಭಂಗಿ ಹಾಡಿನಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ಸೇವನೆಗೆ ಪ್ರೋತ್ಸಾಹ ನೀಡುವಂತಹ ಸಾಹಿತ್ಯವಿದೆ. ಹೀಗಾಗಿ ಪ್ರಕರಣ ದಾಖಲಿಸಿಕೊಳ್ಳಲು ಸಿಸಿಬಿ ಪೊಲೀಸ್ ಅಧಿಕಾರಿಗಳು ಮುಂದಾಗಿದ್ದು, ತಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದೆಂದು ನೊಟೀಸ್ ನಲ್ಲಿ ಪೊಲೀಸರು ಪ್ರಶ್ನಿಸಿದ್ದಾರೆ.
ಹಾಡಿನಲ್ಲಿ ಏನಿದೆ?
ಅಷ್ಟಕ್ಕೂ ಆ ಹಾಡಿನಲ್ಲಿ ಏನಿದೆ ಎಂಬ ಕುತೂಹಲವಿದೆ. ಆ ಹಾಡಿನ ಸಾಲುಗಳು ಈ ರೀತಿಯಾಗಿವೆ - ‘ಧಮ್ಮು ಬಿಡಬೇಡ, ಅದೇ ನಮಗೆ 'ಬಿಯರ್ ಎತ್ತೋದು ಹಳತಾಗಿದೆ, ಗಾಂಜಾ ಎಳೆಯೊದು ಹೊಸದಾಗಿದೆ', 'ಭಂಗಿ ಎಳಕೊಂಡು ನಗುತಾ ಇರು', 'ಶಿವನು ಹಿಡಿದರೆ ಭಂಗಿಯಂತೆ, ನಾವು ಹಿಡಿದರೆ ಕಂಬಿ ಅಂತೆ', 'ಬಿಡಬೇಡ ಧಮ್ಮು, ನಮ್ಮಯ ಪಾಲಿಗೆ ಇದೇ ವಿಸ್ಕಿ, ರಮ್ಮು' ಎಂಬ ಸಾಲುಗಳು ಹಾಡಿನಲ್ಲಿದೆ.
ಮೂರು ವರ್ಷಗಳ ಹಿಂದೆ ಚಿತ್ರ ಬಿಡುಗಡೆಯಾಗಿದ್ದರೂ ಇದೀಗ ಎಚ್ಚೆತ್ತುಕೊಂಡಿರುವ ಪೊಲೀಸರು, ಚಂದನ್ ಅವರಿಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಒಂದು ವೇಳೆ ವಿಚಾರಣೆಗೆ ಹಾಜರಾಗದೇ ಇದ್ದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.