ಬಂಟ್ವಾಳ, ಆ 27(SM): ವೈದ್ಯರ ಮತ್ತು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಬಲಿಯಾಗಿದ್ದ ಗರ್ಭಿಣಿ ಮತ್ತು ಮಗುವಿನ ಕುಟುಂಬಕ್ಕೆ 18.12 ಲಕ್ಷ ರೂ. ಪರಿಹಾರ ನೀಡುವಂತೆ ಮಂಗಳೂರಿನ ಗ್ರಾಹಕರ ನ್ಯಾಯಾಲಯವು ಆದೇಶಿಸಿದೆ. 2014 ರ ಫೆ.6 ರಂದು ಬಿ.ಸಿ.ರೋಡಿನ ಬೈಪಾಸ್ ರಸ್ತೆಯ ಸರಕಾರಿ ನೌಕರರ ಕಾಲೊನಿ ನಿವಾಸಿ ನವೀನ್ ಕುಮಾರ್ ಅವರ ಪತ್ನಿ ಚಂಚಲಾಕ್ಷಿ ಯವರು ಎರಡನೇ ಹೆರಿಗೆಗಾಗಿ ಬಿ.ಸಿ.ರೋಡಿನ ಪ್ರಸೂತಿ ತಜ್ಞೆಯೊಬ್ಬರ ಸಲಹೆಯಂತೆ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು.
ಆದರೆ ಆಸ್ಪತ್ರೆಯ ವೈದ್ಯರು ಸೂಕ್ತ ಸಮಯಕ್ಕೆ ಬಂದು ಚಿಕಿತ್ಸೆ ನೀಡದ ಕಾರಣ ಮತ್ತು ಅಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಚಂಚಲಾಕ್ಷಿಯವರ ಸ್ಥಿತಿ ಬಿಗಡಾಯಿಸಿತ್ತು. ಬಳಿಕ ಆಸ್ಪತ್ರೆಗೆ ಬಂದ ವೈದ್ಯೆಯರು ಚಂಚಲಾಕ್ಷಿ ಸ್ಥಿತಿ ಬಿಗಡಾಯಿಸಿರುವುದನ್ನು ಗಮನಿಸಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲು ಸೂಚನೆ ನೀಡಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಗರ್ಭಿಣಿ ಹಾಗೂ ಆಕೆಯ ಉದರದಲ್ಲಿದ್ದ ಮಗು ಮೃತಪಟ್ಟಿತ್ತು.
ಈ ಬಗ್ಗೆ ಕುಟುಂಬಸ್ಥರು ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಅಲ್ಲದೆ ಅಂದಿನ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ಅವರ ನಿರ್ದೇಶನದಂತೆ ಉನ್ನತ ಮಟ್ಟದ ತನಿಖೆ ಕೂಡ ನಡೆದಿತ್ತು. ಈ ನಡುವೆ ಮೃತರ ಪತಿ ನವೀನ್ ಮತ್ತು ಮೊದಲ ಮಗ ಅದಿತ್ಯ ದ.ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಆಸ್ಪತ್ರೆ ಮತ್ತು ವೈದ್ಯರ ವಿರುದ್ದ ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಮೃತರ ಕುಟುಂಬಕ್ಕೆ 18.12 ಲಕ್ಷ ರೂಪಾಯಿ ಮೊತ್ತವನ್ನು ಆಸ್ಪತ್ರೆ ನೀಡುವಂತೆ ಆದೇಶಿಸಿದೆ.