ದೆಹಲಿ, ಆ 28 (MSP): ದೇಶದಲ್ಲಿ ಪ್ರಪ್ರಥಮ ಬಾರಿಗೆ ಜೈವಿಕ ಇಂಧನ ಬಳಸಿ ವಿಮಾನ ಹಾರಾಟ ನಡೆಸಿ ಇತಿಹಾಸ ಸೃಷ್ಟಿಸಿದೆ. ಆ 27 ರ ಸೋಮವಾರ ಡೆಹ್ರಾಡೂನ್ನಿಂದ ಟೇಕ್ ಆಫ್ ಆದ ಸ್ಪೈಸ್ ಜೆಟ್ ವಿಮಾನ ಯಶಸ್ವಿಯಾಗಿ ದಿಲ್ಲಿಯಲ್ಲಿ ಲ್ಯಾಂಡ್ ಆಗಿದೆ. ವಿಶೇಷ ಎಂದರೆ ಜೈವಿಕ ಇಂಧನ ಬಳಸಿ ಹಾರಾಡಿದ ವಿಮಾನದಲ್ಲಿ ಶೇ. 75 ಜೆಟ್ ಇಂಧನ ಹಾಗೂ ಶೇ. 25 ಜೈವಿಕ ಇಂಧನ ಬಳಸಲಾಗಿದೆ. ಜಟ್ರೋಪಾ ಎಂಬ ಕುರುಚಲು ಸಸ್ಯದ ಬೀಜಗಳಿಂದ ತಯಾರಿಸಿದ ಇಂಧನವನ್ನು ಬಳಸುವ ಬಗ್ಗೆ ಡೆಹ್ರಾಡೂನ್ನ ಸಿಎಸ್ಐಆರ್ ಅಭಿವೃದ್ಧಿಪಡಿಸಿದೆ.
ಬಾಂಬರ್ಡಿಯರ್ ಕ್ಯೂ400 ನಾಮಾಂಕಿತ ಸ್ಪೈಸ್ಜೆಟ್ನ ವಿಮಾನವೂ 78 ಆಸನಗಳಗಳನ್ನು ಒಳಗೊಂಡಿದೆ.ಈ ಯಶಸ್ವಿ ಸಂಚಾರದಲ್ಲಿ ವಿಮಾನಯಾನ ವಲಯದ ನಿಯಂತ್ರಕ ಡಿಜಿಸಿಎ ಅಧಿಕಾರಿಗಳು, ಸ್ಪೈಸ್ಜೆಟ್ ಸಿಬ್ಬಂದಿ ಮುಂತಾದ 20 ಮಂದಿ ಪ್ರಯಾಣಿಕರಾಗಿ ವೈಮಾನಿಕ ರಂಗದಲ್ಲಿ ಇತಿಹಾಸಕ್ಕೆ ಸಾಕ್ಷಿಗಳಾದರು.
ದೇಶದಲ್ಲಿ ಇಂಥ ವಿಶಿಷ್ಟ ಪ್ರಯೋಗ ಇದೇ ಮೊದಲಾಗಿದ್ದು , 2025ರ ವೇಳೆಗೆ ಜೈವಿಕ ಹಾಗೂ ಜೆಟ್ ಇಂಧನ ಮಿಶ್ರಣವನ್ನು ಬಳಸಿ ಹಾರಾಡುವ ವಿಮಾನಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿದ್ದು ಈ ಹಾರಾಟ ಪ್ರಾಯೋಗಿಕವಾಗಿದೆ.
ಜಟ್ರೊಫಾ ಸಸ್ಯದ ಬಗ್ಗೆ
ಕುರುಚಲು ಗಿಡವಾದ ಜಟ್ರೋಫಾ ಒಣ ಹವೆಯ ಪ್ರದೇಶಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಭಾರತದಲ್ಲಿ ಈ ಸಸ್ಯ ಬೆಳೆಯಲು ಪೂರಕವಾದ ವಾತಾವರಣವಿದ್ದು ಈ ಬೆಳೆಗೆ ಹೇಳಿಮಾಡಿಸಿದ ಜಾಗವಾಗಿದೆ. ವಿಶೇಷ ಎಂದರೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಪೊದೆಯಂತೆ ಬೆಳೆಯುವ ಜಟ್ರೋಫಾ ಸಸ್ಯದ ಒಂದು ಗೊಂಚಲಲ್ಲಿ ಸುಮಾರು ಆರರಿಂದ ಎಂಟು ಕಾಯಿಗಳಿರುತ್ತವೆ.ಈ ಕಾಯಿಗಳನ್ನು ಒಣಗಿಸಿ, ಇದರ ಬೀಜಗಳಿಂದ ಎಣ್ಣೆ ತೆಗೆದು ಇಂಧನ ತಯಾರಿಸಲಾಗುತ್ತದೆ.