ದೆಹಲಿ, ಆ 28 (MSP) : ಲಂಡನ್ನಲ್ಲಿ ಮುಸ್ಲಿಂ ಬ್ರದರ್ಹುಡ್ ಜತೆ ಆರೆಸ್ಸೆಸ್ ಸಿದ್ಧಾಂತ ಹೋಲಿಕೆ ಮಾಡಿದ್ದ ರಾಹುಲ್ ನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನದೇ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುವ ಮೂಲಕ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಲು ಸಂಘ ಚಿಂತನೆ ನಡೆಸಿದೆ ಎನ್ನಲಾಗಿದೆ. ಮುಂದಿನ ತಿಂಗಳು ಸೆಪ್ಟೆಂಬರ್ 17ರಿಂದ 19ರ ವರೆಗೆ ವಿಜ್ಞಾನ ಭವನದಲ್ಲಿ 'ಪ್ಯೂಚರ್ ಆಫ್ ಭಾರತ್ ಆನ್ ಆರೆಸ್ಸೆಸ್ ಪರ್ಸ್ಪೆಕ್ಟಿವ್' (ಭಾರತದ ಭವಿಷ್ಯದ ಬಗ್ಗೆ ಆರೆಸ್ಸೆಸ್ ದೃಷ್ಟಿಕೋನ ) ಎನ್ನುವ ವಿಚಾರ ಸಂಕಿರಣದಲ್ಲಿ ಆರೆಸ್ಸೆಸ್ ಮೋಹನ್ ಭಾಗವತ್ ನೀಡುವ ಉಪನ್ಯಾಸಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ವಿಭಿನ್ನ ಸೈದ್ಧಾಂತಿಕ ನಿಲುವುಗಳ ಜನರನ್ನು ಕಾರ್ಯಕ್ರಮಗಳಿಗೆ ವಿಶೇಷ ಆಹ್ವಾನಿತರನ್ನಾಗಿ ಕರೆಯಿಸಿ ಆರೆಸ್ಸೆಸ್ ನ ಪರಿಚರ ನೀಡುವುದು ಈ ಹಿಂದಿನಿಂದಲೂ ಸಂಘದ ಪದ್ದತಿ. ಹೀಗಾಗಿ ಈ ಬಾರಿ ರಾಹುಲ್ ಜತೆಗೆ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಮುಂತಾದ ಮುಖಂಡರು ಆರೆಸ್ಸೆಸ್ ನ ಈ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಕಳೆದ ಜೂನ್ ನಲ್ಲಿ ನಾಗ್ಪುರದಲ್ಲಿನ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿಯನ್ನು ಆಹ್ವಾನಿಸಿದ್ದು, ಕಾಂಗ್ರೆಸ್ಗೆ ಭಾರೀ ಮುಜುಗರ ತಂದಿತ್ತು.
ಇನ್ನೊಂದೆಡೆ ಆರೆಸ್ಸೆಸ್ ನಿಂದ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದ್ದು, ಒಂದು ವೇಳೆ ಆರೆಸ್ಸೆಸ್ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿದರೆ ಈ ಕುರಿತು ಚರ್ಚೆ ನಡೆಸಿ ಬಳಿಕ ನಿರ್ಧರಿಸಲಾಗುವುದು ಎಂದು ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಕೇವಲ ಊಹಾಪೋಹಗಳ ಮೇಲೆ ಪ್ರತಿಕ್ರಿಯೆ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.