ಬಂಟ್ವಾಳ, ಆ 28 (MSP) : ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿ ದರೋಡೆಕೋರರು ಪರಿಚಿತರಂತೆ ಮನೆಯ ಬಾಗಿಲು ಬಡಿದು ಮನೆ ಮಾಲೀಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಪೈಕಿ ಓರ್ವ ನನ್ನು ಬಂಟ್ವಾಳ ನಗರ ಠಾಣಾ ಪೋಲಿಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಬಂಧಿತನನ್ನು ದರೋಡೆಕೋರನನ್ನು ಶಿವಮೊಗ್ಗ ಜಿಲ್ಲೆಯ ಕನಕಬೇಳೂರು ನಿವಾಸಿ ಮುಂಡಪ್ಪ ಗೌಡ ಅವರ ಮಗ ಪ್ರವೀಣ್ ಕೆ ( 31) ಎಂದು ಗುರುತಿಸಲಾಗಿದೆ. ಬಂಧಿತ ದರೋಡೆಕೋರ ಪ್ರವೀಣ್ ವಿರುದ್ದ ಬೆಂಗಳೂರು ಉಪ್ಪಾರಪೇಟೆ ಠಾಣೆಯಲ್ಲಿ ಮೂರು ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಘಟನೆ ವಿವರ
ಆಗಸ್ಟ್ 9 ರಂದು ಮೊಡಂಕಾಪು ನಿವಾಸಿ, ಪ್ರಗತಿಪರ ಕೃಷಿಕ, ನಿವೃತ್ತ ಬ್ಯಾಂಕ್ ಉದ್ಯಮಿ ಜನಾರ್ದನ ಹೊಳ್ಳ ಅವರ ಮನೆಗೆ ನುಗ್ಗಿದ ಅಪರಿಚಿತರಿಬ್ಬರು ಹೊಳ್ಳರ ತಲೆಗೆ ಕತ್ತಿಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿ ಸುಮಾರು 75000 ಮೌಲ್ಯದ 3 ಪವನ್ ತೂಕದ ಚಿನ್ನದ ಸರವನ್ನು ಕಸಿದುಕೊಂಡಿದ್ದರು. ರಾತ್ರಿ ,9.30 ಸಮಯದಲ್ಲಿ ಬಾಗಿಲು ಬಡಿದಾಗ ತನ್ನ ಪುತ್ರ ಬಂದಿರಬಹುದೆಂದು ಭಾವಿಸಿ ಜನಾರ್ದನ ಹೊಳ್ಳ ಬಾಗಿಲು ತೆರೆದಿದ್ದರು. ಈ ಸಂದರ್ಭ ಮನೆಗೆ ನುಗ್ಗಿದ್ದ ಇಬ್ಬರು ದರೋಡೆಕೋರರು ಮನೆಯನ್ನೆಲ್ಲಾ ತಡಕಾಡಿ ಏನು ದೊರಕದೆ ಇದ್ದಾಗ ಜನಾರ್ದನ ಅವರಿಗೆ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಸರವನ್ನು ಸುಲಿಗೆ ಮಾಡಿದ್ದರು. ತಲೆಗೆ ಗಂಭೀರ ಗಾಯಗೊಂಡ ಜನಾರ್ದನ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲುಮಾಡಲಾಗಿತ್ತು.
ಜಿಲ್ಲಾ ಎಸ್.ಪಿ.ರವಿಕಾಂತೇ ಗೌಡ, ಅಡಿಸನಲ್ ಎಸ್.ಪಿ.ಸಜಿತ್ ನಿರ್ದೇಶನ ದಲ್ಲಿ, ಬಂಟ್ವಾಳ ಎ.ಎಸ್.ಪಿ.ಹೃಷಿಕೇಶ್ ಸೋನಾವಣೆ ಅವರ ಮಾರ್ಗದರ್ಶನ ದಲ್ಲಿ, ಬಂಟ್ವಾಳ ವ್ರತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ನೇತೃತ್ವದಲ್ಲಿ ಬಂಟ್ವಾಳ ಎಸ್.ಐ.ಚಂದ್ರಶೇಖರ್, ಅಪರಾಧ ವಿಭಾಗದ ಎಸ್.ಐ.ಹರೀಶ್ , ಎ.ಎಸ್.ಐ. ಸಂಜೀವ ಕೆ ಸಿಬ್ಬಂದಿ ಗಳಾದ ಸುರೇಶ್ ಪಡಾರ್, ಅಬ್ದುಲ್ ಕರೀಂ, ಗಿರೀಶ್, ಯೋಗೀಶ್, ಮಲಿಕ್, ಕುಮಾರ್, ಉಮೇಶ್, ವಿವೇಕ್ ರೈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.