ಮಂಗಳೂರು, ಅ 3: ಕರ್ನಾಟಕ ಸರಕಾರವು 2007 ರ ಅಕ್ಟೋಬರ್ 3 ರಂದು ಬ್ಯಾರಿ ಸಾಹಿತ್ಯ ಅಕಾಡಮಿ ಕುರಿತು ಗಜೆಟ್ ಅಧಿಸೂಚನೆ ಹೊರಡಿಸಿದ ಹಿನ್ನಲೆಯಲ್ಲಿ ಮಂಗಳವಾರ ದ.ಕ.ಜಿಲ್ಲೆಯ ವಿವಿಧೆಡೆ ಬ್ಯಾರಿ ಭಾಷಾ ದಿನ ಆಚರಿಸಲಾಯಿತು. ಕರಪತ್ರ ಬಿಡುಗಡೆ, ಕವಿಗೋಷ್ಠಿ, ರಸಪ್ರಶ್ನೆ ಕಾರ್ಯಕ್ರಮವಲ್ಲದೆ ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ಅಕಾಡಮಿಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್ ವಹಿಸಿದ್ದರು.
ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹ್ಮಾನ್ ಬ್ಯಾರಿ ಭಾಷೆಯ ಅಭಿವೃದ್ಧಿಗೆ ಸಂಬಂಧಿಸಿ ಮಾಹಿತಿಯುಳ್ಳ ಕರಪತ್ರವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಬ್ಯಾರಿಗಳು ಮನೆ ಮನೆಗಳಲ್ಲಿ ಮಾತನಾಡಿದರೆ ಮಾತ್ರ ಭಾಷೆ ಉಳಿದೀತು, ಅಕಾಡಮಿ ಬೆಳೆದೀತು. ಹಾಗಾಗಿ ಸರ್ವ ಬ್ಯಾರಿಗಳು ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಕ್ರಿಯರಾಗಬೇಕಿದೆ ಎಂದರು.
ಬ್ಯಾರಿ ಕಲಾರಂಗ
ಮಂಗಳೂರಿನ ಬ್ಯಾರಿ ಕಲಾರಂಗದ ವತಿಯಿಂದ ದ.ಕ.ಜಿಲ್ಲಾಧಿಕಾರಿ ಕಚೇರಿಯ ಮುಂದೆ ನಡೆದ ಕಾರ್ಯಕ್ರಮದಲ್ಲಿ ‘ಬ್ಯಾರಿ ಭಾಷಾ ಬಲರ್ಮೆರೊ ತೇರ್’ಗೆ ಚಾಲನೆ ನೀಡಲಾಯಿತು.
ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಬ್ಯಾರಿ ಭಾಷೆಯ ಅಭಿವೃದ್ಧಿಗೆ ಸಂಬಂಧಿಸಿ ಮಾಹಿತಿಯುಳ್ಳ ಕರಪತ್ರವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಮಾತೃಭಾಷೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಸಾಂಸ್ಕ್ಕೃತಿಕ ರಂಗ ಶ್ರೀಮಂತವಾದರೆ ಮಾತ್ರ ಭಾಷೆ ಕೂಡ ಶ್ರೀಮಂತವಾದೀತು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್ ಕವಿತಾ ಸನಿಲ್ ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯ ಮೇಲೆ ಅಭಿಮಾನ ಪಟ್ಟರೆ ಮಾತ್ರ ಭಾಷೆ ಬೆಳೆದೀತು. ಹಾಗಾಗಿ ಭಾಷೆಯ ಅವನತಿ ಆಗದಂತೆ ಎಲ್ಲರೂ ಎಚ್ಚರ ವಹಿಸಬೇಕಿದೆ ಎಂದರು.
ಬ್ಯಾರಿ ಭಾಷಾಭಿಮಾನಿಗಳ ಬಳಗ
ಬ್ಯಾರಿ ಭಾಷಾಭಿಮಾನಿಗಳ ಬಳಗ ಮಂಗಳೂರು ಇದರ ವತಿಯಿಂದ ಮಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಬಳಗದ ಸಂಚಾಲಕ ಜೆ.ಹುಸೈನ್ ಅವರ ಅಧ್ಯಕ್ಷತೆಯಲ್ಲಿ ಬ್ಯಾರಿ ಭಾಷಾ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ.ಮುಹಮ್ಮದ್ ಅಲಿ ೨೦ ವರ್ಷದ ಹಿಂದೆ ಬ್ಯಾರಿ ಚಳವಳಿ ಆರಂಭಿಸಿದಾಗ ಕೆಲವು ಮಂದಿ ಬ್ಯಾರಿ ಭಾಷೆ ಅಳಿವಿನಂಚಿನಲ್ಲಿರುವ ಭಾಷೆ, ಇದಕ್ಕೆ ಜೀವ ತುಂಬುವ ಅಗತ್ಯವಿಲ್ಲ ಎಂದಿದ್ದರು. ಆದರೆ ಸತತ ಹೋರಾಟದ ಫಲವಾಗಿ ಸರಕಾರ ಅಕಾಡಮಿಯನ್ನು ಅಸ್ತಿತ್ವಕ್ಕೆ ತಂದಿದೆ. ಆ ಮೂಲಕ ಬ್ಯಾರಿ ಭಾಷೆಗೆ ಮಾನ್ಯತೆ ನೀಡಿದೆ. ಹಾಗಾಗಿ ಬ್ಯಾರಿ ಅಳಿವಿನಂಚಿನಲ್ಲಿರುವ ಭಾಷೆ ಅಲ್ಲ, ಜೀವಂತ ಭಾಷೆ ಎಂಬುದಕ್ಕೆ ಇಂದು ಅಲ್ಲಲ್ಲಿ ನಡೆಯುವ ಕಾರ್ಯಕ್ರಮಗಳೇ ಸಾಕ್ಷಿ ಎಂದರು.