ಕುಂದಾಪುರ, ಆ 28(SM): ನಾಡದೋಣಿಗೆ ನಿಷೇಧ ಹೇರುವ ಮೂಲಕ ಆಳುವ ಸರಕಾರಗಳು ಬಡ ಮೀನುಗಾರರ ಹೊಟ್ಟೆಗೆ ಏಟು ನೀಡಿದೆ. ನಮ್ಮ ಮಕ್ಕಳು ಮನೆಯವರು ಉಪವಾಸ ಮಲಗುವ ಸ್ಥಿತಿ ಬಂದಿದೆ ಎಂದು ರಾಜ್ಯ ನಗರಾಭಿವೃದ್ಧಿ ಖಾತೆ ಸಚಿವ ಖಾದರ್ ಮುಂದೆ ತಾಲೂಕಿನ ಕೋಡಿಯಲ್ಲಿ ಮಂಗಳವಾರ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೋಡಿ ಪ್ರದೇಶದಲ್ಲಿ ಮತಯಾಚನೆಗೆ ತೆರಳಿದ ಸಚಿವ ಖಾದರ್ ಬ್ರೇಕ್ವಾಟರ್ ಪ್ರದೇಶಕ್ಕೆ ಭೇಟಿ ನೀಡಿದರು.
ಲೈಟ್ಫಿಶಿಂಗ್ಗೆ ಅನುಮತಿ ಕೊಟ್ಟು ಸಣ್ಣ ದೋಣಿಯವರು ಮೀನು ಹಿಡಿಯದಂತೆ ಮಾಡಲಾಗಿದೆ. ನಾಡದೋಣಿಯವರಿಗೆ ವರ್ಷದಲ್ಲಿ ೩ ತಿಂಗಳು ಅನುಮತಿ ಕೊಟ್ಟರೂ ಸಾಕು ಬದುಕಿಕೊಳ್ಳುತ್ತೇವೆ. ಆದರೆ ಸರಕಾರ ಬಡವರನ್ನು ಬದುಕಲು ಬಿಡುತ್ತಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಬಡ ಮೀನುಗಾರರ ಅಹವಾಲು ಕೇಳುತ್ತಿಲ್ಲ. ಸೆ.೩ರಂದು ಬೆಂಗಳೂರಿನಲ್ಲಿ ಈ ಬಗ್ಗೆ ಸಭೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದ್ದು ಇದರಲ್ಲಿ ಮೀನುಗಾರರ ಪರ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ದೋಣಿ ಹೋಗಲು ತೊಂದರೆ ಆಗುವ ಮರಳು ದಿಬ್ಬ ತೆಗೆಸಲು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರು ಮಾತನಾಡಿ, ಈ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಗೆ ನಾನು ಹೋಗಿದ್ದೆ. ಅಲ್ಲಿ ಮೀನುಗಾರರ ಮಧ್ಯೆಯೇ ಎರಡು ಪಂಗಡಗಳಾಗಿದ್ದು ಅವುಗಳು ಒಂದು ಇತ್ಯರ್ಥಕ್ಕೆ ಬರಲು ಸೂಚಿಸಿದ್ದಾರೆ. ಅದರ ನಂತರ ಎಲ್ಲರೂ ಒಟ್ಟಾಗಿ ಸಭೆ ನಡೆಯಲಿಲ್ಲ ಎಂದರು. ಅದಕ್ಕೆ ಮೀನುಗಾರರು ನಾಡದೋಣಿ, ಟ್ರಾಲ್ ಬೋಟ್ ಹಾಗೂ ಲೈಟ್ಫಿಶಿಂಗ್ ಮಾಡುವವರನ್ನು ಒಟ್ಟಾಗಿ ಸಭೆ ಕರೆಯಲು ವಿನಂತಿಸಿದರು. ತಾನು ಈ ಕುರಿತು ಬಂದರು ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳ ಜತೆ ಮಾತನಾಡುವುದಾಗಿ ಖಾದರ್ ಭರವಸೆ ಕೊಟ್ಟರು.
ಮುಜುಗರಕ್ಕೊಳಗಾದ ಸಚಿವರು:
ಮಾಧ್ಯಮದವರು ಹಾಗೂ ಇತರ ನಾಯಕರು, ಕಾರ್ಯಕರ್ತರು ಇದ್ದಾಗಲೇ ಮೀನುಗಾರರು ಸರಕಾರದ ವಿರುದ್ಧ ನೇರಾನೇರ ಆಕ್ಷೇಪ ಮಾಡಿದಾಗ ಖಾದರ್ ಅವರು ಮುಜುಗರಕ್ಕೊಳಗಾದರು. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಜನರ ನೆನಪಾಗುತ್ತದೆ. ಆಮೇಲೆ ಈ ಕಡೆ ತಲೆ ಕೂಡಾ ಹಾಕುವುದಿಲ್ಲ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಾಪಚಂದ್ರ ಶೆಟ್ಟಿ ಅವರು ಈ ಹಿಂದೆ ಇಲ್ಲಿ ತಡೆಗೋಡೆ ರಚನೆ ಮಾಡಿದ್ದರು. ಆಗ ಭೇಟಿಯೂ ಕೊಡುತ್ತಿದ್ದರು. ಆದರೆ ಈಗ ಈ ಭಾಗಕ್ಕೆ ಭೇಟಿಯೇ ನೀಡುತ್ತಿಲ್ಲ ಎಂದು ಮೀನುಗಾರರು ಆಪಾದನೆ ಮಾಡಿದರು.
ಕೇಂದ್ರ ಸರಕಾರ ಜನಪರ ಇಲ್ಲ-ಖಾದರ್:
ಕೇಂದ್ರ ಸರಕಾರ ಜನಪರವಿಲ್ಲ. ಈವರೆಗೆ ಸಂಸತ್ತಿನಲ್ಲಿ ರೈತರ ಪರ, ಮೀನುಗಾರರ ಪರ, ಶಿಕ್ಷಣದ ಕುರಿತಾಗಿ, ಯುವಕರಿಗೆ ಉದ್ಯೋಗ ಸೃಷ್ಟಿಯ ಕುರಿತು ಚರ್ಚೆ ನಡೆದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಕರಾವಳಿಯಲ್ಲಿ ಯಾವುದೇ ಗ್ರಾ.ಪಂ.ಗಳನ್ನು ಮೇಲ್ದರ್ಜೆಗೇರಿಸಲು ಜಿಲ್ಲಾಧಿಕಾರಿ ಮೂಲಕ ಪ್ರಸ್ತಾವನೆ ಬಂದರೆ ಜನಸಂಖ್ಯೆ ಆಧರಿಸಿ ಪರಿಶೀಲಿಸಲಾಗುವುದು. ಕುಂದಾಪುರ ಪುರಸಭೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕುಂದಾಪುರಕ್ಕೆ ಕುಡಿಯುವ ನೀರು, ಒಳಚರಂಡಿ ಯೋಜನೆ ಇತ್ಯಾದಿ ಮಾಡಲಾಗಿದೆ. ಆದ್ದರಿಂದ ಜನ ಕಾಂಗ್ರೆಸನ್ನು ಗೆಲ್ಲಿಸಲಿದ್ದಾರೆ ಎಂದರು.