ಕುಂದಾಪುರ, ಆ 28(SM): ಅಕ್ರಮ ಗಣಿಗಾರಿಕೆ ಭೂ ಅತಿಕ್ರಮಣ ಪ್ರಕರಣಗಳ ಸಾಕ್ಷಿದಾರರೊಬ್ಬರಿಗೆ ಹಾಗೂ ಆತನ ಜೊತೆಗಿದ್ದವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೈಂದೂರು ಕಾಲ್ತೋಡಿನ ಸಮೀಪದ ಹೇರಂಜಾಲು ಎಂಬಲ್ಲಿ ನಡೆದಿದೆ. ಕಾಲ್ತೋಡು ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿರುವ ಜನಾರ್ದನ ನಾಯಕ್ ಹಾಗೂ ಜೊತೆಗಿದ್ದ ಬಡಿಯ ಹಾಂಡ ಎಂಬುವರು ಹಲ್ಲೆಗೊಳಗಾದವರು.
೨೦೧೭ರ ಅಕ್ಟೋಬರ್ನಲ್ಲಿ ಕಾಲ್ತೋಡಿನಲ್ಲಿ ನಡೆಯುತ್ತಿದ್ದ ವಿಜಯ ಶೆಟ್ಟಿ ಎಂಬುವರ ವಿರುದ್ಧ ಅಕ್ರಮ ಗಣಿಗಾರಿಕೆ ಸಂಬಂಧಿಸಿ ಎಸಿಬಿಗೆ ನೀಡಲಾಗಿದ್ದ ದೂರಿಗೆ ಹಲ್ಲೆಗೊಳಗಾಗಿರುವ ಜನಾರ್ದನ ನಾಯಕ್ ಸಾಕ್ಷ್ಯ ನುಡಿದಿದ್ದರು. ಇದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಆರೋಪಿ ವಿಜಯ ಶೆಟ್ಟಿ ಜನಾರ್ಧನ ನಾಯಕ್ ಎಂಬುವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು ಈ ಬಗ್ಗೆ ಬೆದರಿಕೆ ಕರೆಯ ರೆಕಾರ್ಡನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಜನಾರ್ದನ ನಾಯಕ್ ಸಲ್ಲಿಸಿ ದೂರು ನೀಡಿದ್ದರು. ಆದರೆ ತನಿಖೆ ಮಂದಗತಿಯಲ್ಲಿ ಸಾಗುತ್ತಿದ್ದು ಈ ಬಗ್ಗೆ ಬೆಂಗಳೂರಿನ ಎಸಿಬಿ ಅಧಿಕಾರಿಗಳು ನಾಲ್ಕು ದಿನದ ಹಿಂದೆ ಹೊಸಕೋಟೆ ಪ್ರದೇಶಕ್ಕೆ ಪರಿಶೀಲನೆ ನಡೆಸಲು ಆಗಮಿಸಿದ್ದರು. ಈ ಸಂದರ್ಭ ಸ್ಥಳದಲ್ಲಿದ್ದ ಬಡಿಯ ಹಾಂಡ ಅವರ ಮೂಲಕ ಸಾಕ್ಷಿದಾರರನ್ನು ಕರೆಯಿಸಲಾಗಿತ್ತು. ಅದೇ ಸಂದರ್ಭ ಅಲ್ಲಿ ಆರೋಪಿ ವಿಜಯ ಶೆಟ್ಟಿ ಮತ್ತು ತಂಡ ಮತ್ತು ಜನಾರ್ದನ ನಾಯಕ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
ಆಗಸ್ಟ್ 26ರ ರವಿವಾರ ಸಂಜೆ ಆರೋಪಿ ವಿಜಯ ಶೆಟ್ಟಿ ಎಂಬುವರು ಜನಾರ್ದನ ನಾಯಕ್ ಎಂಬುವವರ ಕಡೆಯಿಂದ ಕೊಲೆ ಬೆದರಿಕೆ ಇರುವುದಾಗಿ ದೂರು ನೀಡಿದ್ದು, ಸೋಮವಾರ ಜನಾರ್ದನ ನಾಯಕರನ್ನು ಪೊಲೀಸರು ಠಾಣೆಗೆ ಬರ ಹೇಳಿದ್ದರು. ಅದರಂತೆ ಸೋಮವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಬಡಿಯ ಹಾಂಡ ಎಂಬುವರೊಡನೆ ರಿಕ್ಷಾದಲ್ಲಿ ಹೋಗುತ್ತಿರುವಾಗ ವಿಜಯ ಶೆಟ್ಟಿ ಹಾಗೂ ಮೂವರ ತಂಡ ಗಂಭೀರ ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ಜನಾರ್ದನ ನಾಯಕ್ ಅವರ ತಲೆಗೆ ಗಾಯವಾಗಿದೆ. ಬಡಿಯ ಹಾಂಡರ ಕೈ ಮೂಳೆ ಮುರಿದಿದೆ. ಇಬ್ಬರೂ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಜಯ ಶೆಟ್ಟಿ ವಾಹನ ಚಾಲಕ ಮಂಜುನಾಥ ಎಂಬುವವರು ಹಲ್ಲೆಗೊಳಗಾದ ಜನಾರ್ದನ ನಾಯಕ್, ಬಡಿಯ ಹಾಂಡ ಹಾಗೂ ಪ್ರಕಾಶ ನಾಯಕ್, ಅಲ್ಸಾಡಿ ಶೇಖರ ಶೆಟ್ಟಿ ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ.
ಹಲ್ಲೆಗೊಳಗಾದವರ ಆರೋಗ್ಯ ವಿಚಾರಿಸಿದ ಕೋಟ ಶ್ರೀನಿವಾಸ್ ಪೂಜಾರಿ:
ಇನ್ನು ಹಲ್ಲೆಗೊಳಗಾದ ಜನಾರ್ದನ ನಾಯಕ್ ಹಾಗೂ ಬಡಿಯ ಹಾಂಡರವನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಆರೋಗ್ಯ ವಿಚಾರಿಸಿದರು.
ಆರೋಪಿಗಳ ವಿರುದ್ಧ ಕ್ರಮಕ್ಕೆ ಕೋಟ ಆಗ್ರಹ:
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲಾ ಎಸ್ಪಿ ಅವರಿಗೆ ಕಾಲಾವಕಾಶ ನೀಡುತ್ತಿದ್ದೇನೆ. ರಾಜಕಾರಣ ಬದಿಗಿಟ್ಟು ತಕ್ಷಣ ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಗೃಹಸಚಿವರನ್ನು ಭೇಟಿಯಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತೇನೆ. ಗೃಹಮಂತ್ರಿಗಳಿಗೆ ದೂರು ಕೊಡಲು ಅವಕಾಶ ಕೊಡದೇ ಅದಕ್ಕೂ ಮುನ್ನ ಕ್ರಮ ಕೈಗೊಳ್ಳಿ. ಗಾಯಾಳುಗಳನ್ನು ಖುದ್ದು ಭೇಟಿ ಮಾಡಲಿ. ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ನವರ ಆಟಾಟೋಪ ಹೆಚ್ಚಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ ಎಂದರು.