ಮಂಗಳೂರು, ಆ 28(SM): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ಪ್ರಸಿದ್ಧ ವಿಮಾನ ನಿಲ್ದಾಣಗಳಲ್ಲೊಂದು. ದೇಶದ 3 ಟೇಬಲ್ ಟಾಪ್ ರನ್ ವೇ ಹೊಂದಿರುವ ಏರ್ಪೋರ್ಟ್ ಗಳಲ್ಲೊಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಪ್ರತಿನಿತ್ಯ ಹತ್ತಾರು ವಿಮಾನಗಳು ಮಂಗಳೂರಿನಿಂದ ದೇಶ ವಿದೇಶಗಳಿಗೆ ತೆರಳುತ್ತವೆ. ಸಾವಿರಾರು ಪ್ರಯಾಣಿಕರು ಈ ವಿಮಾನ ನಿಲ್ದಾಣ ಮೂಲಕ ಪ್ರಯಾಣ ಬೆಳೆಸುತ್ತಿದ್ದಾರೆ.
ಈಗಾಗಲೇ ಮಂಳೂರು ವಿಮಾನ ನಿಲ್ದಾಣದಲ್ಲಿ 2ನೇ ಹಂತದ ರನ್ ವೇ ವಿಸ್ತರಣಾ ಕಾಮಗಾರಿ ಪೂರ್ಣಗೊಂಡಿದೆ. ಇದೀಗ 3ನೇ ಹಂತದ ರನ್ ವೇ ವಿಸ್ತರಣೆಗಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ರನ್ ವೇ ಗೆ ಸಮಾನಾಂತರವಾಗಿ 120 ಮೀಟರ್ ಭೂಮಿ ಸ್ವಾಧೀನಕ್ಕೆ ಪ್ರಾಧಿಕಾರ ಮುಂದಾಗಿದ್ದು ಅದರಂತೆ ಸ್ಥಳೀಯ ಅದ್ಯಪಾಡಿ ಹಾಗೂ ಕೊಳಂಬೆ ಗ್ರಾಮದ ಸುಮಾರು 32 ಎಕರೆ ಜಾಗದ ಅವಶ್ಯಕತೆ ವಿಮಾನ ನಿಲ್ದಾಣಕ್ಕಿದೆ. ಈ ಗ್ರಾಮಗಳಲ್ಲಿ ಸುಮಾರು 22 ಕುಟುಂಬಗಳ ಸ್ಥಳಾಂತರಗೊಳಿಸಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಈ ಜಾಗದಲ್ಲಿ ವಾಸವಾಗಿರುವ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕಾಗಿರೋದು ಪ್ರಾಧಿಕಾರದ ಜವಾಬ್ದಾರಿ. ಆದರೆ ಈ ವಿಚಾರದಲ್ಲಿ ಪ್ರಾಧಿಕಾರ ಮಾತ್ರ ದ್ವಂದ್ವ ನಿಲುವು ತಳೆಯುತ್ತಿದ್ದು ಕೊಳಂಬೆ, ಅದ್ಯಪಾಡಿ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜಾಗ ಸ್ವಾಧೀನ ಸಂಬಂಧ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರ ಜೊತೆಗೆ ಈಗಾಗಲೇ 5 ಸಭೆ ನಡೆಸಲಾಗಿದೆ. ಕೊಳಂಬೆ ಗ್ರಾಮಸ್ಥರಿಗೆ ಪ್ರತಿ ಸೆಂಟ್ಸ್ ಗೆ 38 ಸಾವಿರ ಹಾಗೂ ಅದ್ಯಪಾಡಿ ಜನತೆಗೆ ಪ್ರತಿ ಸೆಂಟ್ಸ್ ಗೆ 32 ಸಾವಿರ ರೂಪಾಯಿಗಳನ್ನು ಪರಿಹಾರ ರೂಪದಲ್ಲಿ ನೀಡಲು ನಿರ್ಧರಿಸಲಾಗಿತ್ತು. ಆದರೆ ಬಳಿಕ ನಡೆದ ಸಭೆಯಲ್ಲಿ ಕಡಿಮೆ ಪರಿಹಾರ ಮೊತ್ತ ವನ್ನು ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ ಇಲ್ಲಿನ ಗ್ರಾಮಸ್ಥರಿಗೆ ನಿರಾಸೆಯುಂಟಾಗಿದ್ದು, ಅಲ್ಪ ಮೊತ್ತಕ್ಕೆ ಜಮೀನು ನೀಡಿದ್ದಲ್ಲಿ ಜೀವನ ನಿರ್ವಹಣೆ ಅಸಾಧ್ಯ ಎಂಬುವುದಾಗಿ ಗ್ರಾಮಸ್ಥ ಜೀವನ್ ಲೋಬೊ ಅಳಲು ತೋಡಿಕೊಂಡಿದ್ದಾರೆ.
ಈ ಮೊದಲು ನಡೆದ ಸಭೆಯಲ್ಲಿ ಕೊಳಂಬೆ ಪ್ರದೇಶಕ್ಕೆ ಸೆಂಟ್ಸ್ ಗೆ 32,312 ರೂಪಾಯಿಗಳನ್ನು ನಿಗದಿಪಡಿಸಿದ್ದು ಅದ್ಯಪಾಡಿ ಪ್ರದೇಶಕ್ಕೆ 38,800 ದರ ನಿಗದಿಯಾಗಿತ್ತು. ಇದಕ್ಕೆ ಗ್ರಾಮಸ್ಥರೂ ಒಪ್ಪಿದ್ದರೂ ಆ ಬಳಿಕದ ಸಭೆಯಲ್ಲಿ ದರವನ್ನು 19 ಸಾವಿರಕ್ಕೆ ತಗ್ಗಿಸಲಾಗಿದೆ. ಇದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ನಮಗೆ ಈ ಹಿಂದೆ ನಿಗದಿಯಾಗಿದ್ದ ಪರಿಹಾರ ವೆಚ್ಚವನ್ನು ನೀಡಬೇಕು. ಎರಡೂ ಪ್ರದೇಶಗಳಿಗೆ ಸಮಾನ ಪರಿಹಾರ ನೀಡಬೇಕೆಂದು ಗ್ರಾಮಸ್ಥ ಜೋಸೆಫ್ ಆಗ್ರಹಿಸಿದ್ದಾರೆ.
ಸರಕಾರ ನೀಡುವ ಈ ಪರಿಹಾರ ಮೊತ್ತದಲ್ಲಿ ನಾವು ಬೇರೆ ಕಡೆ ಜಾಗ ಖರೀದಿಸಿ ಮನೆ ಕಟ್ಟಿ ವಾಸ್ತವ್ಯ ಮಾಡಲು ಸಾಧ್ಯವಿಲ್ಲ ಅನ್ನೋದು ಗ್ರಾಮಸ್ಥರ ಆತಂಕ. ಹಾಗಾಗಿ ತಮಗೆ ಹಿಂದಿನ ಸಭೆಯಲ್ಲಿ ನಿಗದಿಪಡಿಸಿದ ಪರಿಹಾರ ಮೊತ್ತವನ್ನು ನೀಡುವುದು ಮಾತ್ರವಲ್ಲದೇ ಬೇರೆ ಕಡೆ ಜಾಗ ನಿಗದಿಪಡಿಸಿಕೊಡಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಸಹಾಯಕ ಆಯುಕ್ತರು ಸೂಕ್ತ ಕ್ರಮಕೈಗೊಂಡು ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ಮೊತ್ತ ಒದಗಿಸಿಕೊಡಬೇಕು ಜೊತೆಗೆ ಅಗತ್ಯ ಸೌಕರ್ಯದ ವ್ಯವಸ್ಥೆಯನ್ನು ಮಾಡಿಕೊಡಬೇಕು ಅನ್ನೋದು ಗ್ರಾಮಸ್ಥರ ಆಗ್ರಹಗಳಾಗಿದೆ. ಈ ಹಿನ್ನೆಲೆ ಅಧಿಕಾರಿಗಳು ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದವರು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂಧಿಸಬೇಕಾಗಿದೆ.