ಮಂಗಳೂರು, ಆ 28(SM): ರಾಜ್ಯದ ಮೈತ್ರಿ ಸರಕಾರವನ್ನು ಉರುಳಿಸುವ ಯೋಚನೆಯೊಂದಿಗೆ ಜೆಡಿಎಸ್ ಜೊತೆಗೆ ಹೊಂದಾಣಿಕೆಗೆ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಸಿದ್ದರಾಯ್ಯರದು ಕುಮಾರಸ್ವಾಮಿ ಸರಕಾರವನ್ನು ಪತನಗೊಳಿಸುವುದೊಂದೇ ಗುರಿಯಾಗಿದೆ ಎಂದಿದ್ದಾರೆ.
ಖಾಸಗಿ ಕಾರ್ಯಕ್ರಮದ ಹಿನ್ನೆಲೆ ದ.ಕ. ಜಿಲ್ಲೆಗೆ ಆಗಮಿಸಿದ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, 'ಮೈತ್ರಿ ಸರಕಾರ ದುರುದ್ದೇಶದಿಂದ ಅಸ್ಥಿತ್ವಕ್ಕೆ ಬಂದಿದೆ. ಬಿಜೆಪಿಯವರನ್ನು ದೂರ ಇಡುವುದೊಂದೆ ಅವರ ಉದ್ದೇಶವಾಗಿತ್ತು. ಜನರ ಸೇವೆಗಾಗಿ ಅವರು ಅಧಿಕಾರಕ್ಕೆ ಬರಲಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ನ ಸ್ವಾರ್ಥ ರಾಜಕಾರಣಿಗಳಿಗೆ ರಾಜ್ಯದ ಹಿತಾಸಕ್ತಿ ಬೇಡ' ಎಂದರು. ಇನ್ನು ಜೆಡಿಎಸ್ ಜತೆ ಮುನಿಸಿಕೊಂಡು ಕಾಂಗ್ರೆಸ್ ಸೇರ್ಪಡೆಗೊಂಡಿರುವ ಸಿದ್ಧರಾಮಯ್ಯ ಮತ್ತೆ ದೇವೇಗೌಡರು, ಕುಮಾರಸ್ವಾಮಿ ಅವರೊಂದಿಗೆ ಯಾವುದೇ ಕಾರಣಕ್ಕೂ ಒಟ್ಟಾಗಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಮುಂದಿನ ೧ ತಿಂಗಳೊಳಗೆ ರಾಜ್ಯದ ಮೈತ್ರಿ ಸರ್ಕಾರ ಪತನವಾಗಲಿದೆ' ಎಂದು ಸಚಿವ ಡಿವಿ ಸದಾನಂದ ಗೌಡ ರಾಜ್ಯ ಸರಕಾರದ ಭವಿಷ್ಯ ನುಡಿದಿದ್ದಾರೆ.