ದೆಹಲಿ,ಆ 29 (MSP): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಿಸರ್ವ್ ಬ್ಯಾಂಕ್ನ ಅಧಿಕಾರಿಗಳು ಹಾಗೂ ನೌಕರರು ಸೆ.4, 5ರಂದು ಎರಡು ದಿನಗಳ ಸಾಮೂಹಿಕವಾಗಿ ರಜೆ ಹಾಕಲು ಮುಂದಾಗಿದ್ದಾರೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ನೌಕರರ ಹಾಗು ಅಧಿಕಾರಿಗಳ ಸಂಯುಕ್ತ ಒಕ್ಕೂಟದ ಮುಖ್ಯ ಕಾರ್ಯದರ್ಶಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. ತಮ್ಮ ಬಹುಕಾಲದ ಪಿಂಚಣಿ ಸಂಬಂಧಿತ ಬೇಡಿಕೆ ಈಡೇರದ ಕಾರಣಕ್ಕೆ ಹಾಗೂ ಇತರ ಬೇಡಿಕೆಗಳನ್ನು ಮುಂದಿರಿಸಿ ಈ ಸಾಮೂಹಿಕ ರಜೆ ನಿರ್ಧಾರ ಕೈಗೊಳ್ಳಲಾಗಿದೆ.
10ವರ್ಷ ಕಳೆದರೂ ನಮ್ಮ ಪಿಂಚಣಿ ಸಂಬಂಧಿತ ಬೇಡಿಕೆ ಸಕಾರಗೊಂಡಿಲ್ಲ. ಹಲವು ಹೋರಾಟಗಳ ಬಳಿಕ ಈ ಬೇಡಿಕೆ ಈಡೇರುತ್ತದೆ ಎಂಬ ನಮಗಿದ್ದ ಭರವಸೆ ಸುಳ್ಳಾಗಿದೆ. ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂಬ ಕಾರಣಕ್ಕೆ ಎರಡು ದಿನಗಳ ಕಾಲ ಆರ್ಬಿಐ ಅಧಿಕಾರಿಗಳು ಹಾಗು ನೌಕರರು ಸಾಮಾನ್ಯ ರಜೆ ಪಡೆದುಕೊಳ್ಳಲಿದ್ದಾರೆ ಎಂದಿದ್ದಾರೆ.
ಆರ್ಬಿಐ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಲಿದ್ದು, ಎಲ್ಲರೂ ಸಾಮೂಹಿಕ ರಜೆ ಪಡೆದರೆ ಕೇಂದ್ರೀಯ ಬ್ಯಾಂಕ್ ಹಾಗೂ ದೇಶಾದ್ಯಂತ ಇರುವ ಇದರ ಅಧೀನ ಬ್ಯಾಂಕ್ಗಳ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಂಡಿತಾ.
ಕಾಂಟ್ರಿಬಿಟರಿ ಪಿಎಫ್, ಪೆನ್ಶನ್ ಯೋಜನೆ ಹಾಗೂ 2012ರಿಂದ ನೇಮಕಗೊಂಡಿರುವವರಿಗೆ ಹೆಚ್ಚುವರಿ ಪಿಎಫ್ ನೀಡಬೇಕು ಎಂಬುದು ಇವರ ಆಗ್ರಹವಾಗಿದೆ. ಇದೇ ಉದ್ದೇಶದಿಂದ 2017ರಲ್ಲೇ ಊರ್ಜಿತ್ ಪಟೇಲ್ ಅವರು ಬರೆದಿದ್ದ ಪತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.