ಮಂಗಳೂರು, ಅ 3: ಮಂಗಳೂರಿನ ಬಿಜೆಪಿ ಕಾರ್ಯಕರ್ತರ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿದೆ. ಕಾರಣ ಬಹು ನಿರೀಕ್ಷಿತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳೂರು ಪ್ರವಾಸ ರದ್ದಾಗಿದೆ. ಈ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ಮಠಂದೂರು, ತುರ್ತು ಕಾರಣಗಳಿಂದ ಈ ಪ್ರವಾಸ ರದ್ದಾಗಿದ್ದು, ಇಂದೇ ವಾಪಾಸ್ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿಸಿದರು. ಇದರೊಂದಿಗೆ ಅ 4 ರಂದು ಸಂಜೆ 5ಗಂಟೆಗೆ ಡಾ| ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್ನಲ್ಲಿ ವಿಶೇಷ ಸಭೆ ಹಾಗೂ ಅ 5, 6 ರ ಕೇರಳ ಪ್ರವಾಸವೂ ರದ್ದಾಗಿದೆ . ಅಮಿತ್ ಶಾ, ಮಂಗಳೂರು ಪ್ರವಾಸದ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದರು. ಇನ್ನು ಶಾ ಇಂದು ಚಾಲನೆ ನೀಡಿದ ಜನರಕ್ಷಾ ಯಾತ್ರೆ ಯಲ್ಲಿ ಭಾಗವಹಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಇಂದು ರಾತ್ರಿ ಸುಮಾರು 9 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬಂದಿಳಿಯಲಿದ್ದು, ಅ 4ರಂದು ಕಣ್ಣೂರಿನ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಇದೇ ವೇಳೆ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಉಳಿದಂತೆ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಕಿಶೋರ್ ರೈ ಮತ್ತು ಉಮನಾಥ್ ಕೋಟ್ಯಾನ್ ಉಪಸ್ಥಿತರಿದ್ದರು.