ಮಂಗಳೂರು, ಆ 29 (MSP): ಘಾಟಿ ರಸ್ತೆಯಲ್ಲಿ ನಿತ್ಯವೂ ವಾಹನ ಸವಾರರ ಪರದಾಟ ತಪ್ಪಿಲ್ಲ, ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಒದ್ದಾಡುವುದು ಮಾಮೂಲು ಎಂಬಂತಾಗಿದೆ ಪ್ರಯಾಣಿಕರ ಸ್ಥಿತಿ. ಇತ್ತ ಸುಬ್ರಹ್ಮಣ್ಯ - ಸಕಲೇಶಪುರ ರೈಲು ನಿಲ್ದಾಣಗಳ ಮದ್ಯದಾರಿಯಲ್ಲಿರುವ ಎಡಕುಮೇರಿ ಪ್ರದೇಶದಲ್ಲಿ ರೈಲು ಹಳಿಗಳ ಮೇಲೆ ನಿರಂತರವಾಗಿ ಭೂ ಕುಸಿತವಾಗಿ ಮಣ್ಣು ಬೀಳುತ್ತಿದ್ದು ಅಪ್ಪಿ ತಪ್ಪಿಯೂ ಇನ್ನಾರು ತಿಂಗಳು ಬೆಂಗಳೂರು ಕಡೆಗೆ ರೈಲು ಸಂಚಾರ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ತಲುಪಿದೆ.ಶಿರಾಡಿ ಘಾಟ್ ರಸ್ತೆಯಲ್ಲೂ ವಾಹನ ಸಂಚಾರ ಸ್ಥಗಿತಗೊಳಿಸಿರುವುದರಿಂದ ಮಂಗಳೂರು- ಬೆಂಗಳೂರು ಸಂಚಾರಕ್ಕೆ ಸಮಸ್ಯೆಯಾದೆ.ಇತ್ತ ರೈಲು ಸಂಚಾರವೂ ಆರೇಳು ತಿಂಗಳು ಸ್ಥಗಿತಗೊಂಡರೆ ಸಮಸ್ಯೆ ತೀವ್ರತೆ ಹೆಚ್ಚಾಗಲಿದೆ.
ಈಗಾಗಲೇ ಮಂಗಳೂರು- ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡು ಹಲವು ತಿಂಗಳೂ ಕಳೆದರೂ , ಈಗಾಗಲೇ ಆಗಿರುವ ಹಾನಿಯನ್ನು ಸರಿಪಡಿಸಿ ರೈಲು ಮಾರ್ಗವನ್ನು ಸುಸ್ಥಿತಿಗೆ ತರಲು ಕನಿಷ್ಟ ಇನ್ನು ಆರು ತಿಂಗಳಾದರು ಬೇಕು ಎನ್ನುವುದು ಪರಿಣಿತರ ಅಂಬೋಣ. ಮಣ್ಣು ತೆಗೆಯುವ ಕಾಮಗಾರಿ ನಡೆಯುತ್ತಿದ್ದರೂ ಎಡಕುಮೇರಿ,ದೋಣಿಗಲ್, ಕಡಗರ ಹಳ್ಳ ಮುಂತಾದ ರೈಲು ನಿಲ್ದಾಣದ ಹಾದಿಯಲ್ಲಿ 40ಕ್ಕೂ ಹೆಚ್ಚು ಕಡೆ ಮಣ್ಣಷ್ಟೇ ಅಲ್ಲ, ಹೆಚ್ಚಿನ ಕಡೆ ಬಂಡೆ ಕಲ್ಲುಗಳು, ಬೃಹತ್ ಗಾತ್ರದ ಮರ ಬಿದ್ದಿದ್ದು, ಹಳಿಗಳು ಸಂಪೂರ್ಣ ಅಪ್ಪಚ್ಚಿಯಾಗಿದೆ. ವೇಗದ ಕಾಮಗಾರಿ ಕೆಲಸಕ್ಕೆ ಎಡೆಬಿಡದೆ ಸುರಿಯುತ್ತಿರುವ ಮಳೆ ಅಡ್ಡಿ ಮಾಡುತ್ತಿದೆ. ಮಣ್ಣು ತೆರವಿನ ಕೆಲಸವಾದ ಬಳಿಕ ಸಂಪೂರ್ಣವಾಗಿ ಹಳಿಗಳನ್ನು ದುರಸ್ತಿಗೊಳಿಸಬೇಕು. ಇದಾದ ಬಳಿಕ ಉನ್ನತ ಮಟ್ಟದ ರೈಲ್ವೆ ತಾಂತ್ರಿಕ ಅಧಿಕಾರಿಗಳು ಹಳಿಯನ್ನು ಪರಿಶೀಲಿಸಿ, ಪ್ರಾಯೋಗಿಕ ಸಂಚಾರವನ್ನು ನಡೆಸುತ್ತಾರೆ. ಇವೆಲ್ಲಾ ಪ್ರಕ್ರಿಯೆ ಸಂಪೂರ್ಣವಾಗಿ ಮತ್ತೆ ರೈಲು ಓಡಾಡಲು ಇನ್ನು ಕನಿಷ್ಟ ಆರು ತಿಂಗಳಾದರೂ ಬೇಕು ಅನ್ನುತ್ತಾರೆ ಪರಿಣಿತರು.