ಹುಬ್ಬಳ್ಳಿ,ಆ 29 (MSP): ಸಮ್ಮಿಶ್ರ ಸರ್ಕಾರ ಉರುಳಿಸುವ ಪ್ರಯತ್ನ ಒಳಗಿಂದೊಳಗೆ ನಡೆಯುತ್ತಿರುವ ಬೆನ್ನಲ್ಲೇ, ’ನಮ್ಮ ಸರ್ಕಾರಕ್ಕೆ ಏನೂ ಆಗಲ್ಲ ಸಮ್ಮಿಶ್ರ ಸರ್ಕಾರ ಭದ್ರವಾಗಿದ್ದು ನಾವೇ ಆಡಳಿತ ನಡೆಸುತ್ತೇವೆ ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಸರ್ಕಾರವನ್ನು ಉರುಳಿಸುವ ಬಿಜೆಪಿಯ ತಂತ್ರ ಫಲಿಸುವುದಿಲ್ಲ. ಸರ್ಕಾರ ಬಿದ್ದುಬಿಡಬಹುದು ಎಂದು ಕಾಯುತ್ತಿರುವ ಬಿಜೆಪಿಯವರು ಅಧಿಕಾರ ಚುಕ್ಕಾಣಿ ಹಿಡಿಯಬಹುದು ಎಂದು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಮೈತ್ರಿ ಸರ್ಕಾರ ಬಹಳ ಭದ್ರವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಮ್ಮೊಂದಿಗೆ ಭಿನ್ನಾಭಿಪ್ರಾಯ ಇಲ್ಲ. ಮೈತ್ರಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ಎರಡೂ ಪಕ್ಷಕ್ಕೂ ಗೌರವ ದೊರಕುತ್ತದೆ. ನಮ್ಮ ಜನಗಳೇ ಮಂತ್ರಿಗಳಾಗಿದ್ದಾರೆ. ಹೀಗಾಗಿ ನಮ್ಮನ್ನು ಕಡೆಗಣಿಸುತ್ತಾರೆ ಎನ್ನುವುದು ಸರಿಯಲ್ಲ ಎಂದರು.
ಹುಬ್ಬಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರುತ್ತಾರೆ ಎನ್ನುವುದು ಅಪ್ಪಟ ಸುಳ್ಳು. ಬಿಜೆಪಿಯವರ ಅತಿಯಾಸೆ ಈಡೇರುವುದಿಲ್ಲ ಎಂದರು. ಬಳಿಕ ’ಮತ್ತೆ ಸಿಎಂ ಆಗುತ್ತೇನೆ ’ ಎಂದ ಅವರದೇ ಹೇಳಿಕೆಗೆ ಪ್ರತಿಕ್ರಿಯಿಸಿರುವ, ಅವರು ’ಮುಂದಿನ ಚುನಾವಣೆ ಬಳಿಕ ಸಿಎಂ ಆಗುತ್ತೇನೆ ’ ಎಂದಿದ್ದೇನೆ. ಮುಂದೆ ಜನರು ಆಶೀರ್ವಾದ ಮಾಡಿದರೆ ನಾನು ಸಿಎಂ ಆಗುತ್ತೇನೆ ಎಂದಷ್ಟೇ ಹೇಳಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ನಡುವೆ ರಾಜ್ಯದ ಮೈತ್ರಿ ಸರ್ಕಾರದಲ್ಲಿ ಎದ್ದಿರುವ ಅಸಮಾಧಾನದ ರಾಡಿಯಿಂದ ಭವಿಷ್ಯದಲ್ಲಾಗುವ ಅನಾಹುತಗಳನ್ನು ಅರಿತು ಎಚ್ಚೆತ್ತುಕೊಂಡಿರುವ ಮೈತ್ರಿ ಪಕ್ಷಗಳು ಆ 31 ರಂದು ಸಂಧಾನ ಸಭೆ ತೀರ್ಮಾನಿಸಿದೆ.