ವಿಟ್ಲ, ಆ 29(SM): ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಸ್ವಚ್ಛ ಭಾರತದ ಪರಿಕಲ್ಪನೆಗೆ ದೇಶದೆಲ್ಲೆಡೆ ವಿವಿಧ ಸರಕಾರಗಳು, ಸಂಘ ಸಂಸ್ಥೆಗಳಿಂದ ಸಕಾರಾತ್ಮಕ ಸ್ಪಂದನೆ ದೊರಕುತ್ತಿದೆ. ಶಾಲೆಗಳಿಂದಲೇ ಸ್ವಚ್ಛತೆಯ ಪಾಠವನ್ನು ಮಾಡಲಾಗುತ್ತಿದೆ. ಕೇವಲ ತರಗತಿಯಲ್ಲಿ ಕುಳಿತು ಪಠ್ಯ ಪುಸ್ತಕದಲ್ಲಿರುವ ವಿಚಾರ ಹಾಗೂ ಅಧ್ಯಾಪಕರು ಹೇಳಿದ್ದನ್ನು ಕೇಳುವ ಬದಲು ಆ ಒಂದು ಗ್ರಾಮದ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗಡೆ ಕರೆದೊಯ್ದು ಸ್ವಚ್ಛತೆಯ ಪಾಠವನ್ನು ಕಲಿಸಲಾಗಿದೆ. ಇಂತಹ ಒಂದು ಸಣ್ಣ ಪ್ರಯತ್ನವನ್ನು ನಡೆಸಿರೋದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಶಾಲೆಗಳಲ್ಲಿ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ ಮಿಷನ್, ಬಂಟ್ವಾಳ ತಾಲೂಕು ಪಂಚಾಯತ್ ಹಾಗೂ ಮಾಣಿಲ ಗ್ರಾಮ ಪಂಚಾಯತ್ ವತಿಯಿಂದ ‘ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-೨೦೧೮’ ಕಾರ್ಯಕ್ರಮ ‘ಸ್ವಚ್ಛ ಗ್ರಾಮ-ಸ್ವಚ್ಛ ಜಿಲ್ಲೆ’ ಧ್ಯೇಯದೊಂದಿಗೆ ನಡೆಯುತ್ತಿದೆ.
ಮಾಣಿಲ ಗ್ರಾಮ ಪಂಚಾಯತ್ ಮುತುವರ್ಜಿಯಲ್ಲಿ ಆಗಸ್ಟ್ ೧ರಿಂದ ೩೧ರ ತನಕ ಸ್ವಚ್ಛತಾ ಕಾರ್ಯ ಗ್ರಾಮದಲ್ಲಿ ನಡೆಯಿತ್ತಿದೆ. ಸರಕಾರಿ ಪ್ರೌಢ ಶಾಲೆ ಮಾಣಿಲ, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುರುವ, ದ.ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಕಾಮಜಲು ಈ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ಆವರಣ ಹಾಗೂ ಪರಿಸರದಲ್ಲಿ ಸ್ವಚ್ಛತೆ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳಿಗೆ ನೀಡಲಾದ ಸ್ವಚ್ಛತೆಯ ಪಾಠದಲ್ಲಿ ಶಿಕ್ಷಕರು, ಅಂಗನವಾಡಿ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಬಾಳೆಕಲ್ಲು, ಸದಸ್ಯರಾದ ಶ್ರೀಧರ ಬಾಳೆಕಲ್ಲು, ಕೃಷ್ಣಪ್ಪ ಪೂಜಾರಿ, ಮಾಣಿಲ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಭುವನೇಶ್ವರ್, ಮುರುವ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ದಯಾನಂದ ನಾಯಕ್ ಮತ್ತಿತರರು ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಿದರು.