ಮಂಗಳೂರು, ಆ 29 (MSP): ಮಂಗಳೂರಿನ ಪಿಂಕಿ ಈಗ ದೇಶದ ಗಮನ ಸೆಳೆದಿದ್ದಾಳೆ. ತನ್ನ ಮುದ್ದು ಮುಖದಿಂದಲೇ ಸ್ವರ್ಧೆಯಲ್ಲಿ ಗೆದ್ದು ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್ ಎಂಬ ಪ್ರಶಸ್ತಿ ವಿಜೇತಳಾಗಿದ್ದಾಳೆ. ಹೌದು ಪಿಂಕಿ ಎಂದರೆ ಬೀದಿ ನಾಯಿ. ಆದರೆ ಈಗ ಪಿಂಕಿ ಮಂಗಳೂರಿನ ಜೀನ್ ಕ್ರಾಸ್ತಾ ಅವರ ಮುದ್ದಿನ ಸಾಕು ನಾಯಿ. ಈ ನಾಯಿಯ ಮೂಗು ಮತ್ತು ಬೆರಳಿನ ಕೆಳಭಾಗದಲ್ಲಿ ತಿಳಿಗುಲಾಬಿ ಬಣ್ಣವಿದ್ದು ಎಲ್ಲರನ್ನು ತನ್ನ ಕ್ಯೂಟೆಸ್ಟ್ ಮುಖದಿಂದಲೇ ಆಕರ್ಷಿಸಿ ಪೇಟಾದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ತನ್ನದಾಗಿಸಿದ್ದಾಳೆ.
ಮಂಗಳೂರಿನ ಜೀನ್ ಕ್ರಾಸ್ತಾ 2017ರ ಜುಲೈ ನಲ್ಲಿ ಮಂಗಳಾ ಸ್ಟೇಡಿಯಂ ಬಳಿ ನಡೆದುಹೋಗುತ್ತಿರುವಾಗ ಅಲ್ಲೇ ಸಮೀಪ ನಿರ್ಮಾಣ ಹಂತದ ಕಟ್ಟಡದೊಳಗೆ ನಾಯಿ ಮರಿಯೊಂದು ಸಿಕ್ಕಿ ಹಾಕಿಕೊಂಡು ಅಳುತ್ತಿತ್ತು. ಇದನ್ನು ಕಂಡ ಜೀನ್ ಕ್ರಾಸ್ತಾ ಅವರಿಗೆ ಕನಿಕರವಾಗಿ ನಾಯಿ ಮರಿಯನ್ನು ರಕ್ಷಿಸಿ ಮನೆಗೆ ಕರೆದೊಯ್ದಿದು ಉಪಚರಿಸಿದರು. ಬಳಿಕ ತನ್ನ ತುಂಟಾಟದಿಂದಲೇ ಮನಗೆದ್ದ ಪಿಂಕಿ, ಜೀನ್ ಕ್ರಾಸ್ತಾ ಅವರ ಮನೆಯ ಸಾಕುನಾಯಿಯಾದಳು.
ಪೇಟಾ ಇಂಡಿಯಾ ನಡೆಸುವ ಬೀದಿಯಿಂದ ರಕ್ಷಿಸಲಾಗುವ ಶ್ವಾನಗಳಿಗಾಗಿ ನಡೆಸುವ ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್ ಸ್ಪರ್ಧೆಯಲ್ಲಿ ಇದೀಗ ವಿಜೇತಾಳಾಗುವ ಮೂಲಕ ಬೀದಿ ನಾಯಿಯಾಗಿದ್ದ ಪಿಂಕಿ ದೇಶದ್ಯಾಂತಂತ ಸುದ್ದಿಯಾಗುತ್ತಿದ್ದಾಳೆ . ದೇಶದಾದ್ಯಂತ ಸುಮಾರು ಸಾವಿರಕ್ಕೂ ಹೆಚ್ಚು ದೇಶೀಯ ತಳಿಯ ರಕ್ಷಿಸಲ್ಪಟ್ಟ ಶ್ವಾನಗಳ ಫೋಟೋಗಳು ಪೇಟಾ ಸಂಸ್ಥೆಗೆ ಬಂದಿದ್ದವು. ಶ್ವಾನಗಳ ರಕ್ಷಣೆಯ ಕಥೆಗಳನ್ನು ಕೇಳಿ ಮತ್ತು ಚಿತ್ರಗಳನ್ನು ಪರಿಶೀಲಿಸಿ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಈ ಸಾರಿ ದೇಶದ ವಿವಿಧ ಭಾಗಗಳ ಒಟ್ಟು ಹತ್ತು ಶ್ವಾನಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಪಿಂಕಿಯೂ ಒಬ್ಬಳಾಗಿದ್ದಳು. ಅದರೆ ಸ್ಪರ್ಧೆಯಲ್ಲಿ ಎಲ್ಲರನ್ನು ಹಿಂದಿಕ್ಕಿದ್ದ ಪಿಂಕಿ ಅಂತಿಮವಾಗಿ ತಾನೇ ಕ್ಯೂಟೆಸ್ಟ್ ಡಾಗ್ ಆಗಿ ಹೊರಹೊಮ್ಮಿದ್ದಾಳೆ.