ಬೆಂಗಳೂರು, ಆ 29(SM): ರಾಜ್ಯದ ಸಮ್ಮಿಶ್ರ ಸರಕಾರ ಯಾವುದೇ ಗೊಂದಲಗಳಿಲ್ಲದೆ ಐದು ವರ್ಷ ರಾಜ್ಯದಲ್ಲಿ ಆಳ್ವಿಕೆ ನಡೆಸಲಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷ ಬಿಜೆಪಿಗೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಜೊತೆಯಾಗಿ ಆಳ್ವಿಕೆ ನಡೆಸುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಮ್ಮ ಸರಕಾರದ ಕೆಲಸ ಕಾರ್ಯಗಳನ್ನು ಸಹಿಸಲಾಗದೆ, ಸರಕಾರದ ಬಗ್ಗೆ ಭವಿಷ್ಯ ನುಡುಯಿತ್ತಿದ್ದಾರೆ. ಆದರೆ ಈಗಾಗಲೇ ರಾಜ್ಯ ಸರಕಾರ ನೂರು ದಿನಗಳ ಸಂಭ್ರಮದಲ್ಲಿದೆ. ಸರಕಾರ ಸುಭದ್ರವಾಗಿದ್ದು ಐದು ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದರು.
ಇನ್ನು ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಐದು ವರ್ಷಗಳು ಕಾಯಬೇಕು. ಸಿಎಂ ಕುಮಾರಸ್ವಾಮಿ ನೇತೃವದ ಸರಕಾರ ಈಗಾಗಲೇ ಸಾಕಷ್ಟು ಜನಪರ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದೆ. ಕಳೆದ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಘೋಷಿಸಿದ್ದ ಆಯವ್ಯಯವನ್ನು ಮುಂದುವರೆಸಿದ್ದೇವೆ ಎಂದರು. ಅಲ್ಲದೆ ಹೊಸ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಅಳವಡಿಸಿದ್ದೇವೆ. ಈ ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ರೈತರ 31 ಸಾವಿರ ಕೋಟಿ ರೂ. ಸಾಲಮನ್ನಾ ಅನುಷ್ಠಾನಕ್ಕೆ ಸಿದ್ಧಗೊಂಡಿದೆ. ಇದರ ಜೊತೆಗೆ ಖಾಸಗಿ ಸಾಲ, ಕೈ ಸಾಲವನ್ನೂ ಸಹ ಮನ್ನಾ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.