ಕೊಡಗು, ಆ 29(SM): ಕೊಡಗು ಜಿಲ್ಲೆಯಲ್ಲಿ ಜಲಪ್ರವಾಹದ ಸಂದರ್ಭ ಕುಟುಂಬದ ನಾಲ್ವರನ್ನು ರಕ್ಷಿಸಿ ಬಳಿಕ ಜಲಸಮಾಧಿಯಾಗಿದ್ದ ಗಿಲ್ಬರ್ಟ್ ಮೊಂಡೊನ್ಸಾರ ಮೃತದೇಹ 13 ದಿನಗಳ ಬಳಿಕ ಆಗಸ್ಟ್ 29ರ ಬುಧವಾರ ಪತ್ತೆಯಾಗಿದೆ.
ಆಗಸ್ಟ್ 16ರಂದು ಭಾರೀ ಮಳೆಯ ಸಂದರ್ಭ ಕಾಟಿಕೆರಿ ಗ್ರಾಮದ ಗ್ರೀನ್ ಲೈನ್ ರೆಸೋರ್ಟ್ ಬಳಿಯ ಗಿಲ್ಬರ್ಟ್ ಮನೆ ಹಿಂಬದಿಯಲ್ಲಿದ್ದ ಗುಡ್ಡ ಕುಸಿತಗೊಂಡಿದೆ. ತಕ್ಷಣ ಗಿಲ್ಬರ್ಟ್ ತನ್ನ ಮನೆಯಲ್ಲಿದ್ದ ನಾಲ್ವರನ್ನು ರಕ್ಷಿಸಿದ್ದಾರೆ. ಬಳಿಕ ಯಾವುದೋ ವಸ್ತುವನ್ನು ತರಲೆಂದು ಮನೆಯತ್ತ ತೆರಳಿದಂತಹ ಸಂದರ್ಭ ಮತ್ತೆ ಗುಡ್ಡ ಕುಸಿದಿದ್ದು, ಗಿಲ್ಬರ್ಟ್ ಜೀವಂತ ಸಮಾಧಿಯಾಗಿದ್ದರು.
ಇನ್ನು ಘಟನಾ ಸ್ಥಳದಲ್ಲಿ ಎನ್ ಡಿಆರ್ ಎಫ್ ತಂಡ ಹಾಗೂ ಸ್ಥಳೀಯರು ಸೇರಿಕೊಂಡು ಬೃಹತ್ ಯಂತ್ರಗಳ ಸಹಾಯದಿಂದ ಮಣ್ಣು ತೆರವು ಕಾರ್ಯವನ್ನು ನಡೆಸಿದ್ದಾರೆ. ನಿರಂತರ ಕಾರ್ಯಾಚರಣೆ ಬಳಿಕ ಇಂದು ಗಿಲ್ಬರ್ಟ್ ಅವರ ಮೃತದೇಹ ಪತ್ತೆಯಾಗಿದೆ. ಇನ್ನು ಗುಡ್ಡ ಕುಸಿತದ ಸಂದರ್ಭ ಗಾಯಾಳುಗಳಾಗಿರುವ ಗಿಲ್ಬರ್ಟ್ ಅವರ ಕುಟುಂಬಸ್ಥರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.