ಪಡುಬಿದ್ರಿ, ಆ 29(SM): ಪಡುಬಿದ್ರಿ ಠಾಣಾ ವ್ಯಾಪ್ತಿಯ ಎರ್ಮಾಳು ತೆಂಕ ಪೂಂದಾಡು ಎಂಬಲ್ಲಿಯ ರೈಲ್ವೇ ಮೇಲ್ಸೇತುವೆ ಬಳಿಯ ಹಳಿಯಲ್ಲಿ ಯುವಕನ ಮೃತದೇಹ ಛಿದ್ರ ಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ, ಮೃತದೇಹದ ಕಾಲುಗಳೆರಡೂ ಕಟ್ಟಿದ ಸ್ಥಿತಿಯಲ್ಲಿದ್ದುದರಿಂದ ಕೊಲೆ ನಡೆಸಲಾಗಿದೆ ಎಂಬ ಸಂಶಯ ಕಾಡತೊಡಗಿದೆ. ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಜಿಜ್ಞಾಸೆ ಸ್ಥಳೀಯರಲ್ಲಿ ಉಂಟಾಗಿದ್ದು, ಸಂಬಂಧಿಕರು ಪೋಲಿಸರಿಗೆ ನೀಡಿದ ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ಮೃತ ಯುವಕನನ್ನು ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಆಚಾರ್ಯ(28) ಎಂದು ಗುರುತಿಸಲಾಗಿದೆ. ಮೃತ ಸುಬ್ರಹ್ಮಣ್ಯ ಮರದ ಕೆಲಸ ಮಾಡುತ್ತಿದ್ದು, ಅಪಘಾತ ಸಂಭವಿಸಿದ್ದರಿಂದ ಕಾಲಲ್ಲಿ ನೋವು ಇದ್ದು, ನಡೆದಾಡಲು ಕಷ್ಟ ಪಡುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಸಂಜೆ ಯಾರೋ ಆತನನ್ನು ಬೈಕಿನಲ್ಲಿ ಕರೆದೊಯ್ದಿದ್ದು ಬುಧವಾರ ಬೆಳಗ್ಗೆ ರೈಲ್ವೇ ಹಳಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಮೃತ ಸುಬ್ರಹ್ಮಣ್ಯ ಅವರ ಸಹೋದರ ಸದಾನಂದ ಆಚಾರ್ಯರವರು ತಮ್ಮ ದೂರಿನಲ್ಲಿ, ಸುಬ್ರಹ್ಮಣ್ಯ ಆತ್ಮಹತ್ಯೆ ಮಾಡಿಕೊಳ್ಳುವ ಜಾಯಮಾನದವನಲ್ಲ. ಆತ ಮಂಗಳವಾರ ರಾತ್ರಿ ಪಾದೆಬೆಟ್ಟು ರಾಘವೇಂದ್ರ ಮಠದಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿ ಮನೆಯಿಂದ ತೆರಳಿದ್ದಾನೆ. ಇತ್ತೀಚೆಗೆ ನಡೆದ ಅಪಘಾತದಲ್ಲಿ ಆತನ ಕಾಲಿಗೆ ತೀವ್ರಗಾಯವಾಗಿ ಕಾಲಿಗೆ ಸ್ಟೀಲ್ ರಾಡ್ ಅಳವಡಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೇ ಹಳಿಯಲ್ಲಿ ಇಷ್ಟು ದೂರ ನಡೆಯಲು ಸಾಧ್ಯವೇ ಇಲ್ಲ. ಸುಬ್ರಹ್ಮಣ್ಯನ ಕೈ ಮತ್ತು ಕಾಲನ್ನು ಬಟ್ಟೆಯಿಂದ ಕಟ್ಟಲಾಗಿದೆ. ಆದ್ದರಿಂದ ಈ ಸಾವು ಸಂಶಯಾಸ್ಪದವಾಗಿದೆ ಎಂದು ಠಾಣೆಗೆ ದೂರು ನೀಡಿದ್ದಾರೆ. ಸಹೋದರ ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರೆಸಲಾಗಿದೆ.