ಉಡುಪಿ, ಆ 29(SM): ಕುವೈಟ್ ನ ಜೈಲಿನಲ್ಲಿ ಬಂಧಿಯಾಗಿರುವ ಉಡುಪಿಯ ಬಸ್ರೂರು ಮೂಲದ ಶಂಕರ್ ಪೂಜಾರಿಯವರನ್ನು ಬಂಧನ ಮುಕ್ತಗೊಳಿಸುವ ಪ್ರಯತ್ನ ಮುಂದುವರೆದಿದೆ. ಉಡುಪಿ ಜಿಲ್ಲಾಧಿಕಾರಿ ಮೂಲಕ ಕುವೈಟ್ ರಾಯಭಾರಿ ಕಛೇರಿಗೆ ಪತ್ರ ಬರೆಯಲು ಈಗಾಗಲೇ ನಿರ್ಧರಿಸಲಾಗಿದೆ. ಇದಕ್ಕಾಗಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಟಾನ ಕೈ ಜೋಡಿಸಿದೆ. ಎನ್ ಆರ್ ಐ ಸೆಲ್ ಮೂಲಕ ಶಂಕರ್ ಪೂಜಾರಿ ಅವರ ಬಿಡುಗಡೆಗೆ ಕಾನೂನು ರೀತಿಯ ಹೋರಾಟವನ್ನು ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾನವ ಹಕ್ಕುಗಳ ಸಂಚಾಲಕ ಡಾ.ರವೀಂದ್ರನಾಥ್ ಶಾನುಭಾಗ್ ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಕುವೈಟ್ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಂಕರ ಪೂಜಾರಿ ಎಂಬವರು 3 ತಿಂಗಳ ಹಿಂದೆ ಹತ್ತು ದಿನಗಳ ರಜೆಯಲ್ಲಿ ತನ್ನ ಊರಿಗೆ ಬಂದಿದ್ದರು. ರಜೆ ಮುಗಿಸಿ ವಾಪಾಸ್ಸು ಹೋಗುವ ವೇಳೆ, ತನ್ನ ಸಹೊದ್ಯೋಗಿಯಾದ ಸಾದಿಕ್ನ ವಿನಂತಿಯ ಮೇರೆಗೆ ಉಡುಪಿ ದೊಡ್ಡಣಗುಡ್ಡೆ ನಿವಾಸಿ ಯಾದ ಮುಬಾರಕ್ ಒಂದು ಪಾರ್ಸೆಲ್ ನೀಡಿ ಅದನ್ನು ಕುವೈಟ್ ನಲ್ಲಿರುವ ತನ್ನ ಅತ್ತೆಗೆ ನೀಡುವಂತೆ ಕೇಳಿಕೊಂಡಿದ್ದರು. ಮುಬಾರಕ್ನ ಮಾತನ್ನು ನಂಬಿದ ಶಂಕರ ಪೂಜಾರಿ ಅವರು ಪಾರ್ಸೆಲನ್ನು ಕೊಂಡೊಯ್ದಿದ್ದರು. ಆದ್ರೆ ಕುವೈಟ್ ನ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ತಪಾಸಣೆಗೆ ಒಳಪಡಿಸಿದಾಗ ತಾನು ತಂದ ಪಾರ್ಸೆಲ್ ನಲ್ಲಿ ಕೆಲವು ಮಾತ್ರೆಗಳು ಇದ್ದವು ಎಂಬ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಶಂಕರ ಪೂಜಾರಿಯವರು ನೀಡಿದ ವಿವರಣೆ ಅಲ್ಲಿನ ಪೊಲೀಸರಿಗೆ ವಿಶ್ವಾಸ ಮೂಡಿಸದ ಕಾರಣ ಮತ್ತು ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿನ ಕಾನೂನಿನ ಪ್ರಕಾರ ಬಂಧಿಸಿದ್ದಾರೆ. ಹೀಗಾಗಿ ಶಂಕರ್ ಅವರ ಬಿಡುಗಡೆಗೆ ಮಾನವ ಹಕ್ಕುಗಳ ಪ್ರತಿಷ್ಠಾನದ ಮೂಲಕ ಪ್ರಯತ್ನ ನಡೆಸಲಾಗುತ್ತಿದೆ.