ಮಂಗಳೂರು, ಆ 29(SM): ಹಿಂದೂ ಧರ್ಮದ ಭಗವಾಧ್ವಜವನ್ನು ಸುಟ್ಟ ದಲಿತ ಸಂಘಟನೆಗಳ ವಿರುದ್ದ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ದಲಿತ ಸಂಘರ್ಷ ಸಮಿತಿ ವಿರುದ್ಧ ಬೆಳ್ತಂಗಡಿ ಮತ್ತು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಿನಿ ವಿಧಾನಸೌಧ ಮುಂಭಾಗ ಅಗಸ್ಟ್ 28ನೇ ತಾರೀಖು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆದಿತ್ತು. ಈ ವೇಳೆ ಮನುಸ್ಮೃತಿಯ ಜೊತೆಗೆ ಭಗವಾಧ್ವಜವನ್ನು ಪ್ರತಿಭಟನಾಕಾರರು ಸುಟ್ಟಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದಲಿತ ಮುಖಂಡರ ವರ್ತನೆ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ ಬೆಳ್ತಂಗಡಿ ಠಾಣೆಯಲ್ಲಿ ಹಿಂದೂ ಸಂಘಟನೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಪ್ರತಿಭಟಕಾರರ ವಿರುದ್ದ ದೂರು ನೀಡಿದ್ದಾರೆ. ಪ್ರತಿಭಟನಾಕಾರರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಬಂಟ್ವಾಳದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಬಂಟ್ವಾಳ ಎಎಸ್ಪಿ ಅವರಿಗೆ ದೂರು ನೀಡಲಾಗಿದೆ. ಭಗವಾಧ್ವಜ ಸುಟ್ಟ ಸಂಘಟನೆ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹ ವ್ಯಕ್ತವಾಗಿದೆ. ಹಿಂದೂ ಧರ್ಮದಲ್ಲೇ ಇರುವ ದಲಿತ ಸಂಘಟನೆಗಳ ಇಂತಹ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ.