ಬೆಂಗಳೂರು ಆ 30, (MSP) : ಅನಿರೀಕ್ಷಿತ ’ಸಾಂದರ್ಭಿಕ ಶಿಶು’ವಾಗಿ ರಾಜ್ಯದ ಅಧಿಕಾರ ಗದ್ದುಗೆ ಹಿಡಿದ ಎಚ್.ಡಿ ಕುಮಾರಸ್ವಾಮಿ, ಸರಕಾರದ ಆಯುಷ್ಯ ಹಾಗೂ ಅಸ್ಥಿರತೆಯ ತೂಗುಯ್ಯಾಲೆಯಲ್ಲಿಯೇ ಮುಖ್ಯಮಂತ್ರಿಯಾಗಿ ದೋಸ್ತಿ ಸರ್ಕಾರದ ಲೀಡರ್ ಆಗಿ ಶತ ದಿನ ಪೂರೈಸಿದ್ದಾರೆ.
ಹಾಗೆಂದು ಎಚ್.ಡಿ ಕುಮಾರಸ್ವಾಮಿ ಸಿಎಂ ಕಳೆದ ನೂರು ದಿನ ಹೂವಿನ ಹಾಸಿಗೆಯಾಗಿರದೇ ಹಗ್ಗದ ಮೇಲಿನ ನಡಿಗೆಯಂತೆ ಇದ್ದಿದ್ದು ಜಗಜ್ಜಾಹೀರ. ಕಾಂಗ್ರೆಸ್- ಜೆಡಿಎಸ್ ನಾಯಕರ ಗೊಂದಲದ ಹೇಳಿಕೆ, ವಿವಾದಗಳ ನಡುವೆಯೇ ಸಮ್ಮಿಶ್ರ ಸರಕಾರ ನೂರು ದಿನಗಳನ್ನು ಪೂರೈಸಿದೆ. ಅದರೂ ದೋಸ್ತಿ ಸರ್ಕಾರಕ್ಕೆ ಈ ಶತದಿನ ಅಂತಹ ದೊಡ್ಡ ಮಟ್ಟದ ಸವಾಲುಗಳೇನೂ ಎದುರಾಗಿಲ್ಲ. ಆಡಳಿತ ಯಂತ್ರ ಸಿಎಂ ಅವರ ನಿರೀಕ್ಷೆಗೆ ತಕ್ಕಂತೆ ಚುರುಕುಗೊಳ್ಳಲಿಲ್ಲ ಎನ್ನುವುದಂತು ದಿಟ. ೩೮ ಸೀಟುಗಳನ್ನು ಪಡೆದ ಜೆಡಿಎಸ್ ನಲ್ಲಿ ಸರ್ಕಾರ್ ನೂರುದಿನ ಪೂರೈಸಿದ ಸಂಭ್ರಮವಿದ್ದರೆ, ಅತ್ತ ಕಾಂಗ್ರೆಸ್ ನಲ್ಲಿ ಮಾತ್ರ ಯಾವುದೇ ಸಂಭ್ರದ ವಾತಾವರಣ ಕಂಡುಬರುತ್ತಿಲ್ಲ. ಸರಕಾರ ಸುಲಲಿತವಾಗಿ ನಡೆಯುತ್ತಿಲ್ಲ ಎಂಬುದು ಸ್ವತಃ ಸರಕಾರದಲ್ಲಿ ಎರಡೂ ಪಕ್ಷಗಳಿಗೆ ಗೊತ್ತು. ಕಾಟಚಾರಕ್ಕಾಗಿ ಉಪಮುಖ್ಯಮಂತ್ರಿ ಪರಮೇಶ್ವರ್ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಸರಕಾರ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎನ್ನುವುದನ್ನು ಬಿಂಬಿಸಲು ಪ್ರಯತ್ನಿಸಿದರು.
ಆಂತರಿಕ ಕಿತ್ತಾಟಗಳಿಂದ ಸರಕಾರ ಈ ನೂರು ದಿನಗಳಲ್ಲಿ ನಲುಗಿಹೋಗಿದ್ದಂತು ನಿಜ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಂತ್ರಿ ಮಂಡಲದ ಎಲ್ಲರೂ ಕೂಡಾ ಸರಕಾರ ಸುಭದ್ರವಾಗಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದರೂ ಸರ್ಕಾರದ ಭವಿಷ್ಯ ಎಷ್ಟು ದಿನವೋ ಗೊತ್ತಿಲ್ಲ ಎಂಬುದನ್ನು ಒಪ್ಪಕೊಳ್ಳದೆ ಇರಲಾರರು. ಹೀಗಾಗಿ ಸಮ್ಮಿಶ್ರ ಸರಕಾರ ಬಂದು ನೂರು ದಿನಗಳು ತುಂಬಿದರೂ ಸಂಭ್ರಮದಿಂದಿರೂ ಪಡಲು ಸಾಧ್ಯವಾಗುತ್ತಿಲ್ಲ.