ಮಂಡ್ಯ, ಆ 30 (MSP): ಸಿಎಂ ಕುಮಾರಸ್ವಾಮಿ ರಸ್ತೆಯಲ್ಲಿ ತೆರಳುವ ವೇಳೆ ಹೂ ಮಾರುತ್ತಿದ್ದ ಬಾಲಕಿಯನ್ನು ನೋಡಿ ಕಾರು ನಿಲ್ಲಿಸಿ, ರಸ್ತೆಬದಿಯಲ್ಲಿ ಹೂ ಮಾರುತ್ತಿದ್ದ ಬಾಲಕಿಯ ಕಷ್ಟ, ಕಾರ್ಪಣ್ಯ ಅಲಿಸಿ ಜತೆಗೆ ಆಕೆಯ ಶಿಕ್ಷಣಕ್ಕೆ ನೆರವಿನ ಭರವಸೆ ನೀಡಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಬಳಿ ನಡೆದಿದೆ.
ಕೆಆರ್ಎಸ್ನಲ್ಲಿ ವಾಸ್ತವ್ಯವಿದ್ದ ಕುಮಾರಸ್ವಾಮಿ ಅವರು ರಾಮನಗರಕ್ಕೆ ತೆರಳುವಾಗ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಬಳಿ ಪುಟ್ಟ ಬಾಲಕಿ ಹೂ ಮಾರುವುದನ್ನು ಕಂಡು ಕಾರು ನಿಲ್ಲಿಸಿದರು. ಹೂ ಮಾರಾಟದಲ್ಲಿ ನಿರತಳಾಗಿದ್ದ ಬಾಲಕಿಯಿಂದ ಹೂ ಖರೀದಿಸಿದ ಕುಮಾರಸ್ವಾಮಿ ಆಕೆಯನ್ನು ಮಾತನಾಡಿಸಿ ಯೋಗಕ್ಷೇಮ ವಿಚಾರಿಸಿದರು. ಆಗ ಬಾಲಕಿ ತನ್ನ ಹೆಸರು ಶಬಾಬ್ ತಾಜ್. ನನ್ನ ತಂದೆ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಾನು 6ನೇ ತರಗತಿಯಲ್ಲಿ ಓದುತ್ತಿದ್ದು, ಶಾಲೆಗೆ ರಜೆ ಇದ್ದಾಗ ಹೂ ಮಾರಾಟ ಮಾಡಿ, ಕುಟುಂಬಕ್ಕೆ ನೆರವಾಗುತ್ತಿರುವುದಾಗಿ ಬಾಲಕಿ ಹೇಳಿದಾಗ ಕುಮಾರಸ್ವಾಮಿ ಆಕೆಗೆ, ಶಾಲೆಗೆ ನಿತ್ಯವೂ ಹಾಜರಾಗುವಂತೆ ತಿಳಿಸಿ 100 ರು. ನೀಡಲು ಮುಂದಾದರು. ಆದರೆ ಹಣವನ್ನು ಶಬಾಬ್ ತಾಜ್ ನಯವಾಗಿಯೇ ನಿರಾಕರಿಸಿದಳು. ಬಲವಂತವಾಗಿ ಆಕೆಗೆ ಕುಮಾರಸ್ವಾಮಿ ಹಣ ನೀಡಿ , ನಿಮ್ಮ ತಂದೆ- ತಾಯಿಯೊಂದಿಗೆ ಬೆಂಗಳೂರಿಗೆ ಬರುವಂತೆ ಆಹ್ವಾನಿಸಿ, ವಿದ್ಯಾಭ್ಯಾಸಕ್ಕೆ ನೆರವು ನೆರವು ನೀಡುವುದಾಗಿ ಬಾಲಕಿಗೆ ಭರವಸೆ ನೀಡಿದರು.