ಪುತ್ತೂರು,ಆ 30 (MSP) : ಪಾಠ ಮಾಡಿ, ಮಕ್ಕಳನ್ನು ತಿದ್ದಿ ತೀಡಿ ಉತ್ತಮ ನಡತೆಯನ್ನು ಭೋದಿಸಬೇಕಾಗಿದ್ದ ಶಿಕ್ಷಕನೊಬ್ಬ, ವಿದ್ಯಾರ್ಥಿನಿಗೆ ಪೋಲಿ ಮೆಸೇಜ್ ಗಳನ್ನು ಕಳುಹಿಸಿದ ಆರೋಪದ ಮೇಲೆ ಗ್ರಾಮಸ್ಥರಿಂದ ತರಾಟೆಗೊಳಗಾದ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಿಲ ಸಮೀಪದ ಸುರುಳಿ ಮೂಲೆಯ ಸರ್ಕಾರಿ ಶಾಲೆಯಲ್ಲಿ ಆ.29 ರ ಬುಧವಾರ ನಡೆದಿದೆ.
ಸುರುಳಿ ಮೂಲೆಯ ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಭಾಷೆಯನ್ನು ಬೋಧಿಸುತ್ತಿದ್ದ, ಮಂಜುನಾಥ್ ಎಂಬಾತನೇ ಈ ಕೃತ್ಯದ ಆರೋಪಿ. ಇದೀಗ ಈತನ ವಿರುದ್ದ ಪೋಸ್ಕೋ ಕಾಯಿದೆಯಡಿ ದೂರು ದಾಖಲಾಗಿದ್ದು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹತ್ತನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿಗೆ ಈತ ಶಿಕ್ಷಕನಾಗಿದ್ದು, ಪಾಠ ಮಾಡಿ, ಬುದ್ದಿ ಮಾತು ಹೇಳುವುದು ಬಿಟ್ಟು, ವಿದ್ಯಾರ್ಥಿನಿಗೆ ಒಂದು ತಿಂಗಳಿನಿಂದ ಅಶ್ಲೀಲ ಮೆಸೇಜ್ ಗಳನ್ನು ತನ್ನ ಮೊಬೈಲ್ ನಿಂದ ಕಳುಹಿಸುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿನಿ ಮೊಬೈಲ್ ಬಳಸುತ್ತಿಲ್ಲವಾದರೂ, ಆಕೆಯ ಅಜ್ಜನ ಬಳಿ ಇದ್ದ ಮೊಬೈಲ್ ಗೆ ಆರೋಪಿ ಶಿಕ್ಷಕ ಪೋಲಿ ಮೆಸೇಜ್ ಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದ್ದು, ಈ ವಿಚಾರ ಆಕೆಯ ಪೋಷಕರಿಗೆ ತಿಳಿದು ಶಾಲೆಗೆ ತೆರಳಿ ಪೋಲಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಈ ವಿಚಾರ ಗ್ರಾಮಸ್ಥರಿಗೂ ಹರಡಿ ಎಲ್ಲರೂ ಸೇರಿ ಶಿಕ್ಷಕನಿಗೆ ಘೇರಾವ್ ಹಾಕಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿ ಬಂದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಆ ಕಾಮುಕ ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯ ಪೋಷಕರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.