ಉಡುಪಿ, ಆ 30 (MSP): ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮತ್ತಷ್ಟು ರಂಗೇರಿಸಲು ಹೆಣ್ಣು ಹುಲಿಗಳ ತಂಡವೊಂದು ಸಜ್ಜಾಗುತ್ತಿದ್ದೆ. 18 ಮಂದಿಯನ್ನು ಒಳಗೊಂಡ 'ಅವಿಘ್ನ ವ್ಯಾಘ್ರಾಸ್' ಹುಲಿವೇಷ ತಂಡದಲ್ಲಿ ಯುಕೆಜಿ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಪುಟಾಣಿ ಹೆಣ್ಣು ಹುಲಿಯಿಂದ ಹಿಡಿದು ಪಿಯುಸಿ, ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿನಿಯರಿದ್ದಾರೆ. ಸೆಪ್ಟಂಬರ್ 2ರ ಭಾನುವಾರ ಸಂಜೆ 4.00 ಗಂಟೆಗೆ ಕಡಿಯಾಳಿಯ ಕ್ಯಾತ್ಯಾಯಿನಿ ಮಂಟಪದ ವೇದಿಕೆಯಲ್ಲಿ ಪ್ರದರ್ಶನ ನೀಡಲಿದ್ದಾರೆ ತಾವು ಯಾರಿಗೂ ಕಮ್ಮಿ ಇಲ್ಲದಂತೆ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಲಿದ್ದಾರೆ.
ಇದಕ್ಕಾಗಿಯೇ ಸುಮಾರು ಒಂದು ತಿಂಗಳಿನಿಂದ ಪ್ರತಿನಿತ್ಯ ಕಾಲೇಜು ಮುಗಿಸಿ ಮೂರು ಗಂಟೆ ಅಭ್ಯಾಸ ನಡೆಸುತ್ತಾರೆ. ಮಕ್ಕಳ ಪೋಷಕರು ಕೂಡ ಅತ್ಯುತ್ಸಾಹದಿಂದ ಅವರ ಮನದಾಸೆಗೆ ಸಾಥ್ ಕೊಟ್ತಾ ಇದ್ದಾರೆ. ಪ್ರಪ್ರಥಮ ಬಾರಿಗೆ ಕಡಿಯಾಳಿ ಗಣೇಶೋತ್ಸವ ಸಮಿತಿಯ ಪ್ರೋತ್ಸಾಹದಿಂದ ಈ ಹುಲಿ ವೇಷವನ್ನು ಧರಿಸುತ್ತಿದ್ದಾರೆ. ಮೆಸ್ಕಾಂ ನ ನಿವೃತ್ತ ಉದ್ಯೋಗಿ ಶಿವಪ್ಪ ಪೂಜಾರಿಯವರು ಈ ತಂಡದ ನೇತೃತ್ವ ವಹಿಸಿ ಹುಲಿವೇಷದ ಹೆಜ್ಜೆ ಕಲಿಸುತ್ತಿದ್ದಾರೆ. ಶಿವಪ್ಪ ಅವರು ಅಸಾಮಾನ್ಯ ಹುಲಿ ವೇಷಧಾರಿಯಾಗಿ 1978 ಮತ್ತು 1987ರಲ್ಲಿ ಸತತ ಎರಡು ಗಂಟೆ ಕುಣಿದು ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ರಾಜ್ಯದೆಲ್ಲೆಡೆ ಸಹಿತ ಕೇರಳ, ಆಂದ್ರಪ್ರದೇಶದಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅವಿಘ್ನ ವ್ಯಾಘ್ರಾಸ್ ತಂಡದಲ್ಲಿರುವ ಯುವತಿಯರಿಗಾಗಿಯೇ ಹುಲಿವೇಷದ ಧಿರಸನ್ನು ಬಹಳ ವಿಶಿಷ್ಟವಾಗಿ ವಿನ್ಯಾಸಗಳಿಸಲಾಗುತ್ತಿದೆ. ವಿನ್ಯಾಸಕಾರ 'ಏ1 ಕಾಸ್ಟ್ಯೂಮ್ಸ್' ನ ನಿತಿನ್ ಹೆಣ್ಣು ಹುಲಿಗಳಿಗಾಗಿಯೇ ವಸ್ತ್ರ ವಿನ್ಯಾಸ ಸಿಧ್ದಪಡಿಸುತ್ತಿದ್ದಾರೆ. ಇನ್ನು ಯುವತಿಯರ ತಂಡ ಹುಲಿವೇಷ ಹಾಕುವ ಉದ್ದೇಶವಿಟ್ಟುಕೊಂಡದ್ದು ಹಣ ಮಾಡುವುದಕ್ಕಾಗಿಯಲ್ಲ. ಬದಲಾಗಿ ಒಂದು ಸಮಾಜಸೇವೆಯ ಮಹಾತ್ಕಾರ್ಯಕ್ಕಾಗಿ. ಕಡಿಯಾಳಿ ಗಣೇಶೋತ್ಸವ ಸಮಿತಿಯ ಆಸರೆ ಚಾರಿಟೇಬಲ್ ಟ್ರಸ್ಡ್ ನ ಮಕ್ಕಳಿಗಾಗಿ.
ಟ್ರಸ್ಟ್ ನ ಆಶ್ರಯದಲ್ಲಿರುವ 25 ಮಕ್ಕಳ ಶಿಕ್ಷಣಕ್ಕಾಗಿ ಹುಲಿಕುಣಿತಕ್ಕೆ ಹೆಜ್ಜೆ ಹಾಕಲಿದ್ದಾರೆ. ಜತೆಗೆ ಅನಾಥ ಮಕ್ಕಳ, ಅವಕಾಶ ವಂಚಿತ ಮಕ್ಕಳ ಮನೋಸ್ಥೈರ್ಯ ತುಂಬಲು ಈ ಹುಲಿಕುಣಿತ ಆಯೋಜಿಸಲಾಗಿದ್ದು, ಈ ಯೋಜನೆಗೆ ಸ್ಪೂರ್ತಿಯೇ ಮಕ್ಕಳು ಎನ್ನುತ್ತಾರೆ ಹುಲಿಕುಣಿತ ಅಭ್ಯಾಸಿಸುತ್ತಿರುವ ತಂಡದ ಸದಸ್ಯೆ ಶ್ರುತಿ ಶೇಟ್. ಈ ಹುಲಿ ವೇಷ ತಂಡದ ನೇತೃತ್ವವನ್ನು ಶೃತಿ ಶೇಟ್ ಮತ್ತು ನವ್ಯ ಕಿಣಿ ವಹಿಸಿಕೊಂಡಿದ್ದು, ಚೈತ್ರ ಭಟ್, ದೀಕ್ಷಾ ವಿ, ಸನಿಹಾ ಜೆ ರಾವ್, ಕಾವ್ಯ ಕಿಣಿ, ಮೇಘನಾ ವಿ, ಪೂಜಾ, ವೈಷ್ಣವಿ, ಕೀರ್ತನಾ, ದಿವ್ಯ, ವೈಷ್ಣವಿ ಹೆಬ್ಬಾರ್, ಸ್ವಾತಿ, ಸ್ನೇಹ, ಸಾನ್ವಿ, ಸುಶ್ಮಿತಾ, ಹರ್ಷಿತಾ ಹಾಗೂ ಆರ್ಶಿಯಾ ವೇಷ ಹಾಕಿ ಈ ಬಾರಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.