ಬೆಳ್ತಂಗಡಿ, ಆ 30 (MSP): ಕಳೆದ ಹಲವಾರು ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಹಾಗೆಯೇ ಇರುತ್ತವೆಯೇ ವಿನಾ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಆರೋಪಿಸಿ ತಾ.ಪಂ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಗುರುವಾರ ನಡೆಯಬೇಕಿದ್ದ ಸಭೆಗೆ ಬಾರದೆ ನಿರ್ಗಮಿಸಿದ ವಿದ್ಯಮಾನ ಬೆಳ್ತಂಗಡಿ ತಾ.ಪಂ.ನಲ್ಲಿ ನಡೆಯಿತು.
ತಾ.ಪಂ. ಸಭೆಗಳಲ್ಲಿ ನಿರ್ಣಯಗೊಂಡ ಯಾವುದೇ ವಿಷಯಗಳು ಅನುಷ್ಠಾನಗೊಳ್ಳುತ್ತಿಲ್ಲ ಕಂದಾಯ ಇಲಾಖೆ, ಆರೋಗ್ಯ ಇಲಾಖೆಯಲ್ಲಿ, ಅರಣ್ಯ ಇಲಾಖೆಯ ಬಗ್ಗೆ ಅನೇಕ ದೂರುಗಳು ಇದ್ದು ಇವುಗಳನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅನೇಕ ಸಭೆಯಲ್ಲಿ ನಿರ್ಣಯವಾಗಿದೆ ಎಂದುಸದಸ್ಯರು ಆರೋಪಿಸಿದರಲ್ಲದೆ ಸಭಾಂಗಣದ ಒಳಗೆ ಬರದೆ ಹೊರಗೆ ನಿಂತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸೆಬಾಸ್ಟಿಯನ್, ತಾ,ಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕುಸುಮಾಧರ್, ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸದಸ್ಯರು ಅಸಮಾದಾನಗೊಂಡಿದ್ದಾರೆ. ಇದಕ್ಕೆ ಅಧಿಕಾರಿಗಳೇ ಹೊಣೆಗಾರರು ನೀವೇ ಸದಸ್ಯರಿಗೆ ಉತ್ತರಿಸಬೇಕು ಎಂದು ತಿಳಿಸಿದರು. ಬಳಿಕ ಸಭೆಯನ್ನು ಸೆ.೭ಕ್ಕೆ ಮುಂದೂಡಲಾಯಿತು.
ಅಧಿಕಾರಿಗಳ ಮನವಿ
ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಇಲಾಖೆಯಲ್ಲಿರುವ ಸಿಬ್ಬಂದಿಗಳ ಕೊರತೆಯಿಂದ ಕೆಲವೊಂದು ಕೆಲಸಗಳು ವಿಳಂಬವಾಗುತ್ತಿದೆ. ಕೆಲವು ಇಲಾಖೆಗಳಲ್ಲಿ ೮೦ ಶೇ. ಹುದ್ದೆಗಳು ಖಾಲಿ ಇದೆ. ನಮ್ಮ ಒತ್ತಡವನ್ನು ಜನಪ್ರತಿನಿದಿಗಳ ಅರ್ಥಮಾಡಿಕೊಳ್ಳಬೇಕು ಇದ್ದ ಅಧಿಕಾರಿಗಳ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ತಾ.ಪಂ ಅಧ್ಯಕ್ಷರಿಗೆ ಅಧಿಕಾರಿಗಳು ಮನವಿ ಮಾಡಿದರು.