ಮಂಗಳೂರು, ಆ 30 (MSP): ಒಂದೆಡೆ ಆಗ ತಾನೇ ಕಣ್ಣುಬಿಟ್ಟ ಹಸುಗೂಸು ಇನ್ನೊಂದೆಡೆ ಜೀವನ್ಮರಣದೊಂದಿಗೆ ಹೊರಡಿ ಮುದ್ದು ಕಂದನಿಗೆ ಜನ್ಮ ನೀಡಿ ವಿಧವಶಳಾದ ತಾಯಿಯ ಮೃತದೇಹ - ಇವೆರಡರ ನಡುವೆ ಎರಡು ಕುಟುಂಬಸ್ಥರ ಕಿತ್ತಾಟ. ಈ ಘಟನೆ ಕಂಡು ಬಂದಿದ್ದು ಆಗಸ್ಟ್ 30 ಗುರುವಾರ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ.
9 ತಿಂಗಳ ಹಿಂದೆಯಷ್ಟೇ ಕಾರ್ಕಳ ನಿವಾಸಿ , ಪ್ರಕಾಶ್ ಆಚಾರ್ಯ ರೊಂದಿಗೆ ವಿವಾಹವಾಗಿದ್ದ, ಏಳು ತಿಂಗಳ ಗರ್ಭಿಣಿಯಾಗಿದ್ದ ದೀಪಿಕಾ ಆಚಾರ್ಯರನ್ನು ಆ.29 ರ ಬೆಳಗ್ಗೆ ವೆನ್ಲಾಕ್ ಆಸ್ಪತ್ರೆಗೆ ತಪಾಸಣೆಗಾಗಿ ದಾಖಲಾಗಿದ್ದಾರೆ. ಆದರೆ ಗರ್ಭಿಣಿ ದೀಪಿಕಾ ಆಚಾರ್ಯರನ್ನು ಪರೀಕ್ಷಿಸಿದ ವೈದ್ಯರು ಆಕೆ ಅತಿಯಾದ ರಕ್ತದೊತ್ತಡ (ಬಿ.ಪಿ)ದಿಂದ ಬಳಲುತ್ತಿದ್ದು ಕಂಡು ತಕ್ಷಣ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಆದರೆ ವೈದ್ಯರ ಸತತ ಪ್ರಯತ್ನದ ಬಳಿಕವೂ ಗಂಡು ಮಗುವಿಗೆ ಜನ್ಮನೀಡಿದ ದೀಪಿಕಾ ಅಸುನೀಗಿದ್ದಾರೆ.
ದೀಪಿಕಾ ಮೃತಪಟ್ಟ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಾಯಿ ಮನೆಯವರು ದೀಪಿಕಾ ಸಾವಿಗೆ ಪತಿ ಪ್ರಕಾಶ್ ಆಚಾರ್ಯ ಮನೆಮಂದಿಯ ನಿರ್ಲಕ್ಷ ಹಾಗೂ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ತನ್ನ ಸಹೋದರನಲ್ಲಿ ದೀಪಿಕಾ ಗಂಡನ ಮನೆಯವರ ಕಿರುಕುಳದ ಬಗ್ಗೆ ಆಗ್ಗಾಗ್ಗೆ ಹೇಳಿಕೊಂಡು ನೊಂದುಕೊಳ್ಳುತ್ತಿದ್ದರು.ಅಲ್ಲದೆ ತಾನು ಬರೆಯುತ್ತಿದ್ದ ಡೈರಿಯಲ್ಲಿ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದರು ಎನ್ನಲಾಗಿದೆ. ಗರ್ಭಿಣಿಯಾದರೂ ಆಕೆಯ ಬಗ್ಗೆ ನಿರ್ಲಕ್ಷ ಧೋರಣೆ ತಾಳಿದ್ದನ್ನು ಆರೋಪಿಸಿ ದೀಪಿಕಾ ಮನೆಯವರು ಪ್ರಕಾಶ್ ಕುಟುಂಬಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೃತದೇಹವನ್ನು ತಮಗೆ ಹಸ್ತಾಂತರಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ಪ್ರಕಾಶ್ ಆಚಾರ್ಯ ಮನೆಯವರು ತಿರಸ್ಕರಿಸಿದಾಗ ಎರಡು ಕುಟುಂಬಸ್ಥರ ಸದಸ್ಯರ ಮದ್ಯೆ ಗಲಾಟೆ ಜೋರಾಗಿ ಅವ್ಯಾಚ ಶಬ್ದಗಳಿಂದ ನಿಂದಿಸತೊಡಗಿದ್ದಾರೆ.
ಮೃತದೇಹ ಹಸ್ತಾಂತರಿಸಬೇಕಾದರೆ ದೀಪಿಕಾ ಮೃತಪಟ್ಟ ಸಂದರ್ಭದಲ್ಲಿ ಆಕೆ ಧರಿಸಿದ್ದ ಆಭರಣಗಳನ್ನು ತಮಗೆ ನೀಡುವಂತೆ ಪತಿ ಮನೆಯವರು ಡಿಮ್ಯಾಂಡ್ ಮಾಡಿದ್ದಾರೆ. ಕೊನೆಗೆ ಗಲಾಟೆ ತಾರಕಕ್ಕೇರಿದಾಗ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಆಗಮಿಸಿ ಆಸ್ಪತ್ರೆಯ ಮುಂದೆ ಜಗಳವಾಡುತ್ತಿದ್ದ ಗುಂಪನ್ನು ಚದುರಿಸಿದ್ದಾರೆ.
ಘಟನೆ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎರಡು ಕುಟುಂಬಸ್ಥರನ್ನು ಠಾಣೆಗೆ ಕರೆಯಿಸಿ ಮಾತುಕತೆ ನಡೆಸುತ್ತಿದ್ದಾರೆ.