ಕಾಸರಗೋಡು ಅ3:ಬಿಜೆಪಿ ಕೇರಳ ಘಟಕವು ಆಯೋಜಿಸಿದ್ದ ಜನ ರಕ್ಷಾ ಯಾತ್ರೆಯ ಉದ್ಘಾಟನೆಯ ನಂತರ ತಡರಾತ್ರಿ ಕಾಸರಗೋಡಿನ ಕೆಲ ಪ್ರದೇಶಗಳಲ್ಲಿ ವ್ಯಾಪಕ ರೀತಿಯ ಕಲ್ಲೆಸೆತವುಂಟಾಗಿದೆ.ಕಲ್ಲೆಸತದಲ್ಲಿ ಜನರಕ್ಷಾ ಯಾತ್ರೆಯ ಉದ್ಘಾಟನೆಗೆ ಪಯ್ಯನ್ನೂರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು ಹಿಂತಿರುಗುತ್ತಿದ್ದ ಕೆಲ ಬಸ್ಸುಗಳು ಹಾನಿಗೀಡಾಗಿವೆ.
ಚೆರುವತ್ತೂರು ಹಾಗೂ ನೀಲೇಶ್ವರದಲ್ಲಿ ಸಿಪಿಎಂ ಕಛೇರಿಗಳ ಮೇಲೆ ದಾಳಿ ನಡೆಸಲಾಗಿದ್ದರೆ ಪಡನ್ನಕಾಡ್ ಮದ್ರಸಕ್ಕೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿಯನ್ನುಂಟುಮಾಡೀದ್ದಾರೆ. ಕಯ್ಯೂರುನಲ್ಲಿರುವ ವಸ್ತ್ರ ವ್ಯಾಪಾರ ಅಂಗಡಿ ಹಾಗೂ ಚೆರ್ವತ್ತೂರು ಸಮೀಪದ ಸಿಐಟಿಯು ಧ್ವಜಸ್ಥಂಭವೊಂದು ಆಕ್ರಮಣಕ್ಕೊಳಗಾಗಿದೆ. ಹಠಾತ್ತನೆ ಬಂದ ಗುಂಪೊಂದು ತೀವ್ರವಾದ ಕಲ್ಲೆಸೆತ ನಡೆಸಿದ್ದರಿಂದ ಚೆರ್ವತ್ತೂರು ಕೆಎಎಹ್ಎಂ ಆಸ್ಪತ್ರೆಯ ಕಿಟಕಿ ಗಾಜುಗಳು ಸಂಪೂರ್ಣವಾಗಿ ನಾಶವಾಗಿವೆ.
ಕಾಸರಗೋಡು ಕಣ್ಣನ್ನೂರು ಗಡಿಭಾಗದ ಹಲವು ಪ್ರದೇಶಗಳಲ್ಲಿ ಬಿಜೆಪಿ ಹಾಗೂ ಸಿಪಿಎಂ ಕಾರ್ಯಕರ್ತರು ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ.ಕೆಲ ಪ್ರದೇಶಗಳಲ್ಲಿ ಇತ್ತಂಡಗಳನ್ನು ಚದುರಿಸಲು ಪೋಲಿಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ಗಲಭೆ ಹೆಚ್ಚಿನ ಪ್ರದೇಶಗಳಿಗೆ ಹರಡದಂತೆ ಪೋಲಿಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜನ ರಕ್ಷಾ ಯಾತ್ರೆಗೆ ಪಯ್ಯನ್ನೂರಿನಲ್ಲಿ ಚಾಲನೆ ನೀಡಿದ್ದರು.