ಕಾಸರಗೋಡು, ಆ 30(SM): ಟ್ಯೂಷನ್ ಸೆಂಟರ್ ನಲ್ಲಿ 17 ವರ್ಷದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಗೆ ಏಳು ವರ್ಷ ಕಠಿಣ ಸಜೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಕಾಞ೦ಗಾಡ್ ಬಲ್ಲ ಕಡಪ್ಪುರದ ಡಾ. ಮಹಮ್ಮದ್ ಅಸ್ಗರ್(28) ಪ್ರಕರಣದ ಆರೋಪಿಯಾಗಿದ್ದು, ಕೃತ್ಯ ಸಾಬೀತಾದ ಹಿನ್ನೆಲೆ ಆತನಿಗೆ ಸಜೆ ವಿಧಿಸಲಾಗಿದೆ. ಇನ್ನು ದಂಡ ಪಾವತಿಸಲು ವಿಫಲನಾದರೆ, ಒಂದು ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ತಿಳಿಸಿದೆ. ದಂಡ ಮೊತ್ತವನ್ನು ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿಗೆ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. 2012ರಲ್ಲಿ ಕಾಞ೦ಗಾಡ್ ಟ್ಯೂಷನ್ ಸೆಂಟರ್ ನಲ್ಲಿ ಟ್ಯೂಷನ್ ಗೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅಪರಾಧಿ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಆತನ ವಿರುದ್ಧ ಠಾಣೆಯಲ್ಲಿ ಕೇಸು ದಾಖಲಾಗಿತ್ತು.