ಬೆಂಗಳೂರು, ಆ 30(SM): ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಹೊಸ ವಿವಾದವೊಂದಕ್ಕೆ ಸಿಲುಕಿದ್ದಾರೆ. ಶೂಟಿಂಗ್ ಸಮಯದಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಮೇಲೆ ಹಲ್ಲೆ ಮಾಡಿರುವ ಆರೋಪ ದರ್ಶನ್ ವಿರುದ್ಧ ಕೇಳಿಬಂದಿದೆ. 'ಯಜಮಾನ' ಶೂಟಿಂಗ್ ಸೆಟ್ ನಲ್ಲಿ ದರ್ಶನ್ ಜ್ಯೂನಿಯರ್ ಆರ್ಟಿಸ್ಟ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಕಳೆದ ಎರಡು-ಮೂರು ದಿನಗಳಿಂದ ತಾವರೆಕೆರೆ ಬಳಿಯ ಸ್ಟುಡಿಯೋ ಒಂದರಲ್ಲಿ 'ಯಜಮಾನ' ಚಿತ್ರದ ಸಾಂಗ್ ಶೂಟಿಂಗ್ ನಡೆಯುತ್ತಿತ್ತು. ಹಾಡಿನ ಚಿತ್ರೀಕರಣದಲ್ಲಿ ನೂರಾರು ಸಹ ಕಲಾವಿದರು ಪಾಲ್ಗೊಂಡಿದ್ದರು. ಯಾರೋ ಒಬ್ಬರು ಸಾಂಗ್ ಶೂಟಿಂಗ್ ನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದರಂತೆ. ಇದನ್ನ ಗಮನಿಸಿದ ಚಿತ್ರತಂಡ ಆತನಿಗೆ ಎಚ್ಚರಿಕೆ ಕೊಟ್ಟಿದೆ. ಅಲ್ಲದೆ ಸಹ ಕಲಾವಿದರನ್ನು ಸೆಟ್ ಗೆ ಕರೆ ತಂದವರನ್ನು ತನ್ನ ಬಳಿಗೆ ಕರೆದುಕೊಂಡ ದರ್ಶನ್ ಕಪಾಳ ಮೋಕ್ಷ ಮಾಡಿದ್ದಾರೆ ಅನ್ನೋ ಆರೋಪಗಳು ಕೇಳಿ ಬಂದಿವೆ. ಸಾಲದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎನ್ನುವ ಆರೋಪಗಳು ಕೂಡ ವ್ಯಕ್ತವಾಗಿವೆ.
ಈ ಬಗ್ಗೆ ದರ್ಶನ್ ಪ್ರತಿಕ್ರಿಯಿಸಿದ್ದು, ''ಒಂದು ಸಿನಿಮಾದ ಮೇಲೆ ಒಬ್ಬ ನಿರ್ಮಾಪಕ ಕೋಟ್ಯಾಂತರ ಬಂಡವಾಳ ಹಾಕುತ್ತಾರೆ. ಸಹ ಕಲಾವಿದರಿಗೆ ಪ್ರತಿ ದಿನ ಪೇಮೆಂಟ್ ಕೊಡುತ್ತಾರೆ. ಮೂರೊತ್ತು ಹೊಟ್ಟೆಗೆ ನೀಡುತ್ತಾರೆ. ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಹೀಗಿದ್ದರೂ, ಅವರು ಮೊಬೈಲ್ ನಲ್ಲಿ ಚಿತ್ರೀಕರಣವನ್ನು ಸೆರೆ ಹಿಡಿಯಬಹುದೇ?'' ಎಂದು ಪ್ರಶ್ನಿಸಿದ್ದಾರೆ. ಆದ್ರೆ ದರ್ಶನ್ ವರ್ತನೆಗೆ ಮಾತ್ರ ಎಲ್ಲೆಡೆ ಪರ ವಿರೋಧಗಳು ಕೇಳಿ ಬರುತ್ತಿವೆ.