ಮಂಗಳೂರು,ಆ 31 (MSP) : 18ನೇ ಏಷ್ಯನ್ ಗೇಮ್ಸ್ನಲ್ಲಿ ಮಂಗಳೂರಿನ ಪೂವಮ್ಮ ದೇಶಕ್ಕೆ ಕೀರ್ತಿ ತಂದಿದ್ದಾರೆ.' ಕರಾವಳಿಯ ಚಿಗರೆ' ಎಂ.ಆರ್ ಪೂವಮ್ಮ ಅವರನ್ನ ಒಳಗೊಂಡ ಮಹಿಳೆಯರ 4x400 ಮೀಟರ್ ರಿಲೆಯಲ್ಲಿ ಭಾರತಕ್ಕೆ ಚಿನ್ನವನ್ನ ತಂದುಕೊಟ್ಟಿದ್ದಾರೆ. ಅವರು ಚಿನ್ನದ ಪದಕ ಗೆಲ್ಲುತ್ತಿದ್ದಂತೆ ಕರಾವಳಿಯಲ್ಲಿ ಹಾಗೂ ಮನೆಯಲ್ಲಿ ಸಡಗರಮನೆ ಮಾಡಿದ್ದು, ಮನೆಯವರು ಒಬ್ಬರಿಗೊಬ್ಬರು ಸಿಹಿ ಹಂಚಿ ಖುಷಿ ಹಂಚಿಕೊಂಡಿದ್ದಾರೆ. ಪೂವಮ್ಮ ತಂದೆ ರಾಜು, ತಾಯಿ ಜಾನಕಿ, ತಮ್ಮ ಮಂಜು, ತಂಗಿ ಲಿಖಿತ ಅವರು ಟಿವಿಯಲ್ಲಿ ಪೂವಮ್ಮ ಮಾಡಿರುವ ಸಾಧನೆ ನೋಡಿ ಸಂಭ್ರಮಿಸಿದ್ದಾರೆ.
ಭಾರತದ ರಿಲೇ ತಂಡಕ್ಕೆ ಬಹರೇನ್ ತಂಡದ ಸ್ವರ್ಧಾಳುಗಳು ತೀವ್ರ ಸ್ವರ್ಧೆ ಒಡ್ಡಿದ್ದರೂ ಕೂಡಾ ಭಾರತ ಗೆಲುವನ್ನು ತನ್ನ ಮುಡಿಗೇರಿಸಿತು. ಇದು ಭಾರತದ ಮಹಿಳಾ 4x400ಮೀ. ರಿಲೇ ತಂಡಕ್ಕೆ ಏಷ್ಯನ್ ಗೇಮ್ಸ್ ನಲ್ಲಿ ದಕ್ಕಿದ ಸತತ 5 ನೇ ಬಂಗಾರದ ಪದಕವಾಗಿದೆ. ಗೆದ್ದ ಸ್ವರ್ಣ ಪದಕವನ್ನು ಕೊಡಗಿನ ನಿರಾಶ್ರಿತರಿಗೆ ಅರ್ಪಿಸುತ್ತೇನೆ ಎಂದು ಪೂವಮ್ಮ ಹೇಳಿದ್ದಾರೆ.
ಪೂವಮ್ಮ ಅವರ ತಂದೆ ಮೂಲತಃ ಕೊಡಗಿನ ಸೋಮವಾರಪೇಟೆಯವರು. ತಾಯಿ ಮುಕ್ಕೋಡ್ಲುವಿನವರು, ತಂದೆ ಮಂಗಳೂರಿಗೆ ಬಂದು ವಿಮಾನ ನಿಲ್ಡಾಣದಲ್ಲಿ ಸಿಬ್ಬಂದಿಯಾಗಿ ಸೇರಿದ ಬಳಿಕ ಇಡೀ ಕುಟುಂಬ ಮಂಗಳೂರಿನಲ್ಲಿಯೇ ವ್ಯಾಸ್ತವ್ಯ ಹೂಡಿದ್ದಾರೆ.