ಮಂಗಳೂರು, ಆ31(SS): ಜೋಡುಪಾಲ ಸೇರಿದಂತೆ ಕೊಡಗಿನ ಬೇರೆ ಬೇರೆ ಭಾಗದಲ್ಲಿ ಭೂಕುಸಿತ ಮತ್ತು ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿದ್ದ ಅನೇಕ ಕುಟುಂಬಗಳನ್ನು ಪ್ರಾಣ ಅಪಾಯದಿಂದ ರಕ್ಷಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿ ಗಣೇಶ್ ಗೌಡ ಮತ್ತು ಇತರ ಸಿಬ್ಬಂದಿಗಳಿಗೆ ಬಹುಮಾನ ಘೋಷಿಸಲಾಗಿದೆ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎ.ಡಿ.ಜಿ.ಪಿ ಕಮಲ್ ಪಂಥ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೋಡುಪಾಲ ಸೇರಿದಂತೆ ಕೊಡಗಿನ ಬೇರೆ ಬೇರೆ ಭಾಗದಲ್ಲಿ ಸಂಭವಿಸಿದ ದುರಂತ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ನೂರಾರು ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಪೊಲೀಸರ ಜೊತೆ ಅನೇಕ ಯುವಕರು ಕೂಡ ಜನರ ರಕ್ಷಣೆಗೆ ಪ್ರಾಣದ ಹಂಗು ತೊರೆದು ಸಾಹಸ ಮೆರೆದಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿ ಗಣೇಶ್ ಗೌಡ ಮತ್ತು ಇತರ ಸಿಬ್ಬಂದಿಗಳಿಗೆ ಬಹುಮಾನ ಘೋಷಿಸಲಾಗಿದೆ. ಮಾತ್ರವಲ್ಲ, ಮುಂದಿನ ವರ್ಷ ಮುಖ್ಯ ಮಂತ್ರಿ ಪದಕಕ್ಕೂ ಇವರ ಹೆಸರು ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಯುವಜನತೆ ಮಾದಕ ವ್ಯಸನಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಡ್ರಗ್ ಮಾಫಿಯಾವನ್ನು ಬುಡದಿಂದ ಕಿತ್ತು ಎಸೆಯಲು ಪೊಲೀಸ್ ಇಲಾಖೆ ಮುಂದಾಗಿದೆ. ಡ್ರಗ್ಸ್ ಮಾಫಿಯಾದಲ್ಲಿ ಕೈಜೋಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.