ಸಂಪಾಜೆ, ಆ31(SS): ಮಹಾಮಳೆಯಿಂದ ಕೊಡಗಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ವೀರರ ನಾಡು ಕೊಡಗಿನ ನೆರೆ ಅರಗಿಸಿಕೊಳ್ಳಲಾಗದ ವಾಸ್ತವ ಎಂದರೂ ತಪ್ಪಾಗಲಾರದು. ಅಲ್ಲಿನ ಸಂತ್ರಸ್ತ ಜನರಿಗೆ ಆರ್ಥಿಕ ಅಗತ್ಯಗಳಷ್ಟೇ ಭಾವನಾತ್ಮಕ ಸ್ಪಂದನೆಯ ಅವಶ್ಯಕತೆಯೂ ಇದೆ.
ಕೊಡಗಿನ ಜೋಡುಪಾಲ, ಮದೆನಾಡಿನಲ್ಲಿ ದುರಂತ ಎದುರಾಗಿ ಹತ್ತಕ್ಕೂ ಹೆಚ್ಚು ದಿನಗಳು ಕಳೆದಿವೆ. ಆದರೂ ಅಲ್ಲಿನ ಮೂರು ಗ್ರಾಮದ 25ಕ್ಕೂ ಹೆಚ್ಚು ಕುಟುಂಬಗಳ ನೂರಾರು ನಿವಾಸಿಗಳು ಇನ್ನು ಕಲ್ಲುಗುಂಡಿ, ಸಂಪಾಜೆಯಲ್ಲಿರುವ ಗಂಜಿ ಕೇಂದ್ರದಲ್ಲೇ ಆಶ್ರಯ ಪಡೆಯುತ್ತಿದ್ದಾರೆ.
ಕೊಡಗಿನಲ್ಲಿ, ಜೋಡುಪಾಲದಲ್ಲಿ ಬೆಟ್ಟ ಗುಡ್ಡಗಳು ಕುಸಿದು ಮನೆಯ ಮೇಲೆ ಬಿದ್ದು ಎಲ್ಲವೂ ನೆಲಸಮವಾಗಿದೆ. ಸುಖವಾಗಿ ಬಾಳಬೇಕಾಗಿದ್ದ ಕುಟುಂಬಗಳು ಇದೀಗ ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ಕಣ್ಣೀರಿಡುವಂತಾಗಿದೆ. ಈ ನಡುವೆ ತಮ್ಮ ತಮ್ಮ ಮನೆಗಳನ್ನು ನೋಡಿ ಹೋಗಲು ಬರುವ ಬಹುತೇಕ ನಿವಾಸಿಗಳು ಅಲ್ಲಿಂದ ಸಾಮಾಗ್ರಿಗಳನ್ನು ಹೊತ್ತು ಒಯ್ಯುತ್ತಿದ್ದಾರೆ. ಕೆಲವು ಮನೆಗಳಿಗೆ ಹಾನಿ ಆಗದಿದ್ದರೂ, ಇಲ್ಲಿ ಮತ್ತೆ ಮಳೆಯಾಗಿ ಭೂಕುಸಿತವಾದರೆ ಅಪಾಯ ಅನ್ನುವ ಭಾವನೆ ನಿವಾಸಿಗಳಲ್ಲಿದೆ.
ಹೀಗಾಗಿ ಸಂತ್ರಸ್ತ ಜನರು ಸರ್ಕಾರದ ಮೊರೆ ಹೋಗಿದ್ದಾರೆ. ಪುನರ್ವಸತಿ ಮಾಡಿಕೊಡಲು ಮನವಿ ಸಲ್ಲಿಸುತ್ತಿದ್ದಾರೆ.ಮಾತ್ರವಲ್ಲ, ಸ್ವಯಂಸೇವಕರ ಜೊತೆಗೆ ಮನೆಗೆ ತೆರಳಿ, ಅಗತ್ಯ ವಸ್ತುಗಳನ್ನು ಮೂಟೆ ಕಟ್ಟಿ ಸಂತ್ರಸ್ತರ ಕೇಂದ್ರಕ್ಕೆ ಹೊತ್ತು ತರುತ್ತಿದ್ದಾರೆ. ದುರಂತದ ಭಯ ಸಂತ್ರಸ್ತರಲ್ಲಿ ಆವರಿಸಿದ್ದು, ಮತ್ತೆ ಬೆಟ್ಟಗಳ ಮಧ್ಯೆ ವಾಸ ಇರುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.