ಮಂಗಳೂರು,ಮಾ 21(DaijiworldNews/MS): ನವಮಂಗಳೂರು ಬಂದರಿನಿಂದ ಸರಕು ಹೊತ್ತು ಸಾಗಿಸುತ್ತಿದ್ದ ಹಡಗು ಮುಳುಗಡೆಗೊಂಡಿದ್ದು ಅದರಲ್ಲಿದ್ದ ಆರು ಮಂದಿ ಕಾರ್ಮಿಕರನ್ನು ಕೋಸ್ಟ್ ಗಾರ್ಡ್ ಪಡೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.


ಮಾರ್ಚ್ 19ರಂದು ಮಂಗಳೂರು ಬಂದರಿನಿಂದ 120 ಟನ್ ಸರಕು ಮತ್ತು ಗ್ರಾನೈಟ್ ಹೇರಿಕೊಂಡು ದ್ದ ಸಫಿನಾ ಆಲ್ ಮಿರ್ಝಾಲ್ ಹಡಗು ಲಕ್ಷದ್ವೀಪದ ಕಡೆ ತೆರಳಿತ್ತು. ಆದರೆ
ಇಂಜಿನ್ ಕೋಣೆಯಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಹಡಗಿನ ಒಳಗಡೆ ನೀರು ತುಂಬಿ ಮುಳುಗಲಾರಂಭಿಸಿತು. ನವಮಂಗಳೂರು ಬಂದರಿನಿಂದ 45 ನಾಟಿಕಲ್ ಮೈಲು ದೂರದಲ್ಲಿ ತಾಂತ್ರಿಕ ತೊಂದರೆಯಿಂದ ಕೆಟ್ಟು ಮುಳುಗುವ ಹಂತದಲ್ಲಿ ಸರಕು ಹಡಗಿನಲ್ಲಿ ಕಾರ್ಮಿಕರು ಜೀವನ್ಮರಣ ಸ್ಥಿತಿಯಲ್ಲಿ ಹೊರಡುತ್ತಿದ್ದರು.
ತಕ್ಷಣ ರಕ್ಷಣೆಗಾಗಿ ಮಾಹಿತಿ ನೀಡಿದ ಕಾರ್ಮಿಕರು ಜೀವರಕ್ಷಕ ವ್ಯವಸ್ಥೆಗಳನ್ನು ಬಳಸಿಕೊಂಡು ರಕ್ಷಣೆಗಾಗಿ ಕಾಯುತ್ತಿದ್ದರು.ಕೂಡಲೇ ಕಾರ್ಯಾಚರಣೆಗಿಳಿದ ಕೋಸ್ಟ್ ಗಾರ್ಡ್ ನ ಕಣ್ಗಾವಲು ವಿಮಾನ ಡಾರ್ನಿಯರ್ ಕಾಸರಗೋಡು ಸಮುದ್ರದಲ್ಲಿ ಮುಳುಗುತ್ತಿದ್ದ ಹಡಗನ್ನು ಒಂದೇ ಗಂಟೆಯಲ್ಲಿ ಪತ್ತೆಹಚ್ಚಿತು.
ಆ ಬಳಿಕ ಸಿ 448 ಕೋಸ್ಟ್ ಗಾರ್ಡ್ ಹಡಗು ದುರ್ಘಟನೆಯ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನು ರಕ್ಷಿಸಿದೆ ಎಂದು ಡಿಐಜಿ ವೆಂಕಟೇಶ್ ತಿಳಿಸಿದ್ದಾರೆ ಹಡಗಿನಲ್ಲಿದ್ದ ಸರಕು ಸಂಪೂರ್ಣವಾಗಿ ಸಮುದ್ರ ಪಾಲಾಗಿದೆ.