ಬ್ರಹ್ಮಾವರ, ಮಾ 21(DaijiworldNews/MS):ಬ್ರಹ್ಮಾವರ ತಾಲೂಕಿನ ನೈಲಾಡಿ ಸಮೀಪ ಆಹಾರ ಹುಡುಕಿ ಬಂದಿದ್ದ ಚಿರತೆಯೊಂದು ಮನೆಯ ಕೋಣೆಯೊಳಗೆ ಬಂಧಿಯಾಗಿದೆ.ಭಾನುವಾರ ಬೆಳಗ್ಗಿನ ಜಾವ ಆಹಾರ ಹುಡುಕತ್ತಾ ಬಂದಿದ್ದ ಚಿರತೆ ಸಾಕು ನಾಯಿಯ ಭೇಟಿಗೆ ಮುಂದಾಗಿದೆ. ಈ ವೇಳೆ ಹೆದರಿದ ನಾಯಿ ಮನೆಯ ಕೋಣೆಯೊಳಗೆ ನುಗ್ಗಿದೆ. ನಾಯಿಯನ್ನೇ ಬೆನ್ನಟ್ಟಿ ಚಿರತೆ ಕೊಠಡಿಗೆ ಹೋಗಿದೆ.ಕೋಣೆಯೊಳಗೆ ಸದ್ದು ಕೇಳಿ ಮನೆಯವರು ಎಚ್ಚರಗೊಂಡು ಕೋಣೆ ಬಾಗಿಲು ಹಾಕಿದ್ದಾರೆ.

ಸ್ಥಳಕ್ಕೆ ಶಂಕರನಾರಾಯಣ ವಲಯದ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ್, ಸಿಬ್ಬಂದಿ ರವಿ, ರವೀಂದ್ರ, ಸಂತೋಷ್ ಜೋಗಿ, ವಿಠಲ್ ನಾಯ್ಕ್, ಲಕ್ಷ್ಮಣ, ಶಿವು, ಸುದೀಪ್ ಶೆಟ್ಟಿ ಕಾರ್ಯಾಚರಣೆ ಯಲ್ಲಿ ಭಾಗಿಯಾಗಿದ್ದರು.
ಬೋನ್ ಇಟ್ಟು ಅರಣ್ಯ ಇಲಾಖೆ ಸಾರ್ವಜನಿಕರ ಸಹಕಾರದೊಂದಿಗೆ ಚಿರತೆಯನ್ನು ಹಿಡಿದರು. ಸ್ಥಳದ ಸುತ್ತಲೂ ಊರಾರು ಸ್ಥಳೀಯರು ಸೇರಿದ್ದಾರೆ.ಸತತ ಒಂದೂವರೆ ಗಂಟೆಯ ನಿರಂತರ ಕಾರ್ಯಾಚರಣೆ ನಡೆಸಿ ಚಿರತೆ ಯನ್ನು ಬಂಧಿಸಲಾಗಿದೆ. ಬಳಿಕ ಸೈಬರ್ಕಟ್ಟೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಮೀಸಲು ಅರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.