ಮಂಗಳೂರು, ಆ31(SS): ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆಗಳು ಹಾಗೂ ಬಂಟ್ವಾಳ ಪುರಸಭೆಯ 89 ವಾರ್ಡ್ಗಳ ಪ್ರತಿನಿಧಿಗಳ ಆಯ್ಕೆಗೆ ಇಂದು ಮತದಾನ ನಡೆಯುತ್ತಿದೆ.
ಒಟ್ಟು 250 ಅಭ್ಯರ್ಥಿಗಳು ಕಣದಲ್ಲಿದ್ದು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರ ಬಳಸಲಾಗುತ್ತಿದೆ. ಉಳ್ಳಾಲ, ಪುತ್ತೂರು ನಗರ ಸಭೆ, ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಪುತ್ತೂರು ನಗರಸಭೆ ವ್ಯಾಪ್ತಿಯ 41 ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.
ಈ ನಡುವೆ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರಿಗೆ ಮತದಾರರ ಚೀಟಿ ದೊರೆತಿಲ್ಲ ಎಂಬ ದೂರು ಉಳ್ಳಾಲದಲ್ಲಿ ಕೇಳಿಬಂದಿದ್ದು, ಉಳ್ಳಾಲ ನಗರಸಭೆ ವ್ಯಾಪ್ತಿಯ ಮಾಸ್ತಿಕಟ್ಟೆಯ ಸುಂದರಿಬಾಗ್ ವಾರ್ಡ್ ವ್ಯಾಪ್ತಿಯ ಜನರು ಮತದಾರರ ಚೀಟಿಗಾಗಿ ಪರದಾಡಿದ್ದರು.
ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿದೆ. ಸುಗಮವಾಗಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ಪ್ರತಿ ಮತಗಟ್ಟೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಪೊಲೀಸರು ಹಾಗೂ ಅಧಿಕಾರಿಗಳು ವಾಹನಗಳ ಮೂಲಕ ಪೆಟ್ರೋಲಿಂಗ್ ಮಾಡುತ್ತಿದ್ದಾರೆ. ನೀತಿ ಸಂಹಿತೆ ಪರಿಶೀಲನಾ ನಿಗಾ ತಂಡದ ಅಧಿಕಾರಿಗಳು ಸಹ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಚರಿಸುತ್ತಾ ಚುನಾವಣಾ ಅಕ್ರಮಗಳ ತಡೆಗೆ ಸನ್ನದ್ಧರಾಗಿದ್ದಾರೆ.