ಮಂಗಳೂರು, ಮಾ.21 (DaijiworldNews/PY): "ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಬೈಂದೂರು ಹಾಗೂ ಕಾರವಾರದಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಈಗಾಗಲೇ ಯೋಜಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ" ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.







ನಗರದ ಟಿಎಂಎ ಪೈ ಕನ್ವೆನ್ಶನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಕೋಸ್ಟ್ಲೈನ್ ಬ್ಯುಸಿನೆಸ್ ಕಾನ್ಕ್ಲೇವ್ ಉದ್ಘಾಟಿಸಿ ಮಾತನಾಡಿದ ಅವರು, "ಉಡಾನ್ ಯೋಜನೆಯಡಿ ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಭಿವೃದ್ದಿಪಡಿಸಲಾಗಿದೆ. ಈ ವಿಮಾನ ನಿಲ್ದಾಣಗಳಿಂದ ಪ್ರತಿದಿನ ಸುಮಾರು 15 ರಿಂದ 20 ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ವಿಮಾನ ನಿಲ್ದಾಣಗಳು ವ್ಯಾಪಾರ ಮತ್ತು ವ್ಯಾಪಾರಕ್ಕೆ ಸಹಕಾರಿಯಾಗಿದೆ" ಎಂದು ತಿಳಿಸಿದರು.
"ಸಾವಿರಾರು ಎಕರೆ ಭೂಮಿಯನ್ನುಸ್ವಾಧೀನಪಡಿಸಿಕೊಟ್ಟಲ್ಲಿ ನಾವು ಅತ್ಯುತ್ತಮ ಕೈಗಾರಿಕಾ ಯೋಜನೆಗಳನ್ನು ನೀಡುತ್ತೇವೆ. ಈಗಾಗಲೇ ದ.ಕ ಜಿಲ್ಲೆಯ ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನಲ್ಲಿ 200 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ಸಂಪೂರ್ಣಗೊಂಡಿದೆ. ನಮಗೆ ಇನ್ನೂ ಸಾವಿರಾರು ಎಕರೆ ಭೂಮಿಯ ಅವಶ್ಯಕತೆ ಇದೆ" ಎಂದರು.
"ಕೈಗಾರಿಕೆಗಳು ಬೆಂಗಳೂರನ್ನೇ ಕೇಂದ್ರೀಕೃತವಾಗಿರಿಸಿಕೊಂಡಿವೆ. ಇದನ್ನು ಎರಡು, ಮೂರು ಹಂತದ ನಗರಗಳಿಗೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ಬಯಸಿದೆ. ಮಂಗಳೂರು, ಹುಬ್ಬಳ್ಳಿ, ಮೈಸೂರು, ಧಾರವಾಡ ನಗರಗಳು ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾಣುತ್ತದೆ" ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, "ಕೈಗಾರಿಕಾ ಅಭಿವೃದ್ಧಿಯಲ್ಲಿ ಕರ್ನಾಟಕವು ದೇಶದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಮಂಗಳೂರು ಕೂಡ ಬೆಂಗಳೂರಿನಂತೆ ಅಭಿವೃದ್ಧಿ ಹೊಂದಬೇಕು. ಇದಕ್ಕೆ ಲ್ಯಾಂಡ್ ಬ್ಯಾಂಕ್ ಅಗತ್ಯವಿದೆ. ಜಿಲ್ಲಾಧಿಕಾರಿ ಸಹಕಾರದೊಂದಿಗೆ 2,000 ಎಕರೆ ಭೂಮಿಯನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕರಾವಳಿಯಲ್ಲಿ ಹೊಸ ಮಾನವ ಸಂಪನ್ಮೂಲ ಹೆಚ್ಚಾಗಿದೆ. ಮಂಗಳೂರಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಕಷ್ಟು ಅವಕಾಶಗಳಿವೆ" ಎಂದು ತಿಳಿಸಿದರು.
"ಮಂಗಳೂರು-ಬೆಂಗಳೂರು ಚತುಷ್ಪಥ ರಸ್ತೆಯ ಟೆಂಡರ್ ಆಗಿದ್ದು, ಎರಡು ವರ್ಷಗಳಲ್ಲಿ ಇದನ್ನು ಸಾರ್ವಜನಿಕ ಬಳಕೆಗೆ ತೆರೆಯಲಾಗುವುದು. ರಾಜ್ಯದಲ್ಲಿ ಧಾರ್ಮಿಕ ಪ್ರವಾಸೋದ್ಯಮ, ಹೊಟೇಲ್-ರೆಸಾರ್ಟ್ ಪ್ರವಾಸೋದ್ಯಮ ಮತ್ತು ವೈದ್ಯಕೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಅಸಂಖ್ಯಾತ ಅವಕಾಶಗಳಿವೆ. ವಾಹನ, ಆಹಾರ ಮತ್ತು ಪೆಟ್ರೋಲಿಯಂ ಯೋಜನೆಗಳನ್ನು ಸಚಿವರು ನೀಡಿದ್ದಲ್ಲಿ, ಜಿಲ್ಲೆಯು ಅವುಗಳನ್ನು ಸಮರ್ಥವಾಗಿ ನಿರ್ವಹಿಸುತ್ತದೆ" ಎಂದರು.
ಎನ್ಎಂಪಿಟಿ ಅಧ್ಯಕ್ಷ ವೆಂಕಟರಮಣ ಮಾತನಾಡಿ, "ಕೈಗಾರಿಕಾ ಮೂಲಸೌಕರ್ಯವು ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿದೆ. ಕರ್ನಾಟಕ ಕೈಗಾರಿಕಾ ವಲಯವು ದೇಶದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ದೇಶದ ಆರ್ಥಿಕತೆಯು ಪ್ರತಿವರ್ಷ ಅಭಿವೃದ್ಧಿ ಹೊಂದುತ್ತಿದೆ. ದೇಶದಲ್ಲಿಯೂ ಮುಂಚೂಣಿಯಲ್ಲಿದೆ" ಎಂದು ಹೇಳಿದರು.
ಎಂಆರ್ಪಿಎಲ್ನ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಮಾತನಾಡಿ, "ಎಂಆರ್ಪಿಎಲ್ನ ನಾಲ್ಕನೇ ಹಂತದ ಯೋಜನೆಗೆ 20,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಇದಕ್ಕಾಗಿ ಭೂಸ್ವಾಧೀನವೂ ಅಂತಿಮ ಹಂತದಲ್ಲಿದೆ" ಎಂದು ತಿಳಿಸಿದರು.
ಕೈಗಾರಿಕಾ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಕೂಡ ಈ ಸಂದರ್ಭದಲ್ಲಿ ಮಾತನಾಡಿದರು.
ಈ ವೇಳೆ, ಎನ್ಎಂಪಿಟಿ, ಎಂಆರ್ಪಿಎಲ್, ನಿಟ್ಟೆ ವಿ.ವಿ ಮತ್ತು ಹ್ಯಾಂಗ್ಯೋ ಐಸ್ಕ್ರೀಮ್ ಸೇರಿದಂತೆ ಕರಾವಳಿ ಪ್ರದೇಶದ ಕೈಗಾರಿಕಾ ಮತ್ತು ವ್ಯಾಪಾರ ಅಭಿವೃದ್ಧಿಗೆ ಸಹಕರಿಸಿದ ಅನೇಕ ಸಂಸ್ಥೆಗಳನ್ನು ಎಫ್ಐಸಿಸಿಐ ಪರವಾಗಿ ಸನ್ಮಾನಿಸಲಾಯಿತು.
ದ.ಕ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ವಿನಯ್ ಹೆಗ್ಡೆ ಉಪಸ್ಥಿತರಿದ್ದರು.
ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್ ವಂದಿಸಿದರು. ಮುರಳೀಧರ್ ಶೆಣೈ ಪ್ರಾರ್ಥಿಸಿದರು. ಡಾ.ಸುಧೀರ್ ರಾಜ್ ಕೆ. ಕಾರ್ಯಕ್ರಮ ನಿರೂಪಿಸಿದರು.